ಬೆಂಗಳೂರು : ರಾಜ್ಯ ಸರ್ಕಾರವು ಫೆ.29 ರೊಳಗೆ ಪರಿಷ್ಕೃತ ಜಾತಿ ಗಣತಿ ವರದಿ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದ್ದಾರೆ.
ವಿಧಾನಪರಿಷತ್ ನಲ್ಲಿ ಈ ಕುರಿತು ಉತ್ತರಿಸಿರುವ ಸಚಿವ ಶಿವರಾಜ ತಂಗಡಗಿ ಅವರು, ಪರಿಷ್ಕೃತ ಜಾತಿ ಗಣತಿ ವರದಿ ಸ್ವೀಕಾರಕ್ಕೆ ಸರ್ಕಾರ ಬದ್ಧವಾಗಿದ್ದು, ವರದಿ ಸಲ್ಲಿಕೆಯಾದ ನಂತರ ಸಂಪೂಟದಲ್ಲಿ ಚರ್ಚಿಸಿ, ನ್ಯೂನತೆಗಳಿದ್ದರೆ ಸರಿಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಪ್ರಸ್ತುತ ಕೆ. ಜಯಪ್ರಕಾಶ್ ಹೆಗ್ಡೆ ನೇತೃತ್ವದ ಆಯೋಗದ ಕಾರ್ಯಾವಧಿ ಈ ತಿಂಗಳು 29 ಕ್ಕೆ ಕೊನೆಗೊಳ್ಳಲಿದೆ. ಅಷ್ಟರೊಳಗೆ ವರದಿ ಸಲ್ಲಿಕೆ ನಿರೀಕ್ಷಿಸಲಾಗಿದೆ. ಆಯೋಗವು ಎಚ್. ಕಾಂತರಾಜ್ ನೇತೃತ್ವದ ಆಯೋಗ ಸಿದ್ಧಪಡಿಸಿರುವ ವರದಿಯ ದತ್ತಾಂಶಗಳನ್ನು ಬಳಸಿಕೊಂಡು ಪರಿಷ್ಕೃತ ವರದಿ ಸಿದ್ದಪಡಿಸುತ್ತಿದೆ ಎಂದರು.