ಕೋಲ್ಕತ್ತಾ: ಪಶ್ಚಿಮ ಬಂಗಾಳ ಪೊಲೀಸರು ಶುಕ್ರವಾರ ಹೂಗ್ಲಿ ಜಿಲ್ಲೆಯಲ್ಲಿ ಶಾಲಾ ಶಿಕ್ಷಕನೊಬ್ಬನನ್ನು ಬಂಧಿಸಿದ್ದಾರೆ. ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ವಿವಸ್ತ್ರಗೊಳಿಸಿ ಅವರ ಫೋಟೋಗಳನ್ನು ತೆಗೆದ ಆರೋಪದಲ್ಲಿ ಪೋಕ್ಸೊ ಕಾಯ್ದೆಯ ಹಲವು ಸೆಕ್ಷನ್ಗಳ ಅಡಿಯಲ್ಲಿ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಸ್ಥಳೀಯ ಗ್ರಾಮಸ್ಥರು ನೀಡಿದ ದೂರಿನ ಆಧಾರದ ಮೇಲೆ ಶಿಕ್ಷಕನನ್ನು ಬಂಧಿಸಲಾಗಿದೆ. ಅವರ ವಿರುದ್ಧದ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಿಯಬ್ರತಾ ಬಕ್ಷಿ ತಿಳಿಸಿದ್ದಾರೆ.
ಮಕ್ಕಳ ಪಾಲಕರು ಶಾಲೆಯಲ್ಲಿ ಧರಣಿ ನಡೆಸಿ, ಪೊಲೀಸರು ಬರುವವರೆಗೂ ಶಿಕ್ಷಕರನ್ನು ಕಟ್ಟಡದೊಳಗೆ ಕೂಡಿ ಹಾಕಿದ್ದರು.
ಕೆಲ ದಿನಗಳಿಂದ ಶಿಕ್ಷಕ ಈ ರೀತಿ ಮಾಡುತ್ತಿದ್ದ. ಅವನು ಫೋನ್ ನಲ್ಲಿ ಮಕ್ಕಳ ಫೋಟೋಗಳನ್ನು ತೆಗೆದಿದ್ದಾನೆ. ನಾವು ಕಠಿಣ ಕ್ರಮಕ್ಕೆ ಒತ್ತಾಯಿಸುತ್ತೇವೆ ಎಂದು ಪೋಷಕರೊಬ್ಬರು ಹೇಳಿದ್ದಾರೆ.