ಬೆಂಗಳೂರು: ಕರ್ನಾಟಕ ಭೂ ಕಂದಾಯ(ತಿದ್ದುಪಡಿ) ಮಸೂದೆ 2024ಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಗಿದೆ.
ಶಾಸಕ ಸ್ಥಾನ ಖಾಲಿ ಇರುವುದು, ಸಮಯದ ಅಭಾವ ಮೊದಲಾದ ಕಾರಣಗಳಿಂದ ಶಾಸಕರು ನಿರಾಕರಿಸಿದಲ್ಲಿ ಆ ಕ್ಷೇತ್ರದ ಯಾವುದೇ ವ್ಯಕ್ತಿಯನ್ನು ಬಗರ್ ಹುಕುಂ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲು ಈ ತಿದ್ದುಪಡಿಯು ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.
ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಸೂದೆ ಮಂಡಿಸಿ, ಯಾವುದೇ ಶಾಸಕರು ಬಗರ್ ಹುಕುಂ ಸಮಿತಿಯಲ್ಲಿ ಇರಲು ನಿರಾಕರಿಸಿ ಲಿಖಿತ ರೂಪದಲ್ಲಿ ತಿಳಿಸಿದರೆ ಇಲ್ಲವೇ ಶಾಸಕ ಸ್ಥಾನ ಖಾಲಿ ಇದ್ದರೆ ಆ ಕ್ಷೇತ್ರದ ಯಾವುದೇ ವ್ಯಕ್ತಿಯನ್ನು ಬಗರ್ ಹುಕುಂ ಸಮಿತಿಗೆ ಅಧ್ಯಕ್ಷರಾಗಿ ನೇಮಕ ಮಾಡಬಹುದು ಎಂದು ಮಾಹಿತಿ ನೀಡಿದ್ದಾರೆ.
ಯಾವುದೇ ವಿಧಾನಸಭಾ ಕ್ಷೇತ್ರದಲ್ಲಿ ಒಂದಕ್ಕಿಂತ ಹೆಚ್ಚು ಸಮಿತಿಗಳನ್ನು ನೇಮಕ ಮಾಡುವ ಅಧಿಕಾರವನ್ನು ಜಿಲ್ಲಾಧಿಕಾರಿಯಿಂದ ರಾಜ್ಯ ಸರ್ಕಾರಕ್ಕೆ ನೀಡಲಾಗಿದೆ. ಒಂದಕ್ಕಿಂತ ಹೆಚ್ಚು ತಾಲೂಕುಗಳನ್ನು ಹೊಂದಿದ ವಿಧಾನಸಭಾ ಕ್ಷೇತ್ರಗಳಲ್ಲಿ ಹೆಚ್ಚು ಜನಸಂಖ್ಯೆ ಹೊಂದಿರುವ ತಾಲೂಕು ತಹಶೀಲ್ದಾರರನ್ನು ಸಮಿತಿಯ ಸದಸ್ಯರನ್ನಾಗಿ ನೇಮಕ ಮಾಡಲಾಗುವುದು ಎಂದು ಹೇಳಲಾಗಿದೆ.