ನವದೆಹಲಿ: ದೇಶದ ಪ್ರಮುಖ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಭಾರ್ತಿ ಏರ್ಟೆಲ್ ವಿಮಾನ ಪ್ರಯಾಣಿಕರಿಗೆ ಮಾರ್ಗ ಮಧ್ಯೆಯೂ ಮೊಬೈಲ್ ಸಂಪರ್ಕ ಸೇವೆ ಒದಗಿಸಲು ಮುಂದಾಗಿದ್ದು, ಏರೋ ಮೊಬೈಲ್ ಸಂಸ್ಥೆಯ ಜೊತೆ ಒಪ್ಪಂದ ಮಾಡಿಕೊಂಡಿದೆ.
ಎಮಿರೇಟ್ಸ್, ಎತಿಹಾದ್ ಸೇರಿ 19 ವಿಮಾನಯಾನ ಸಂಸ್ಥೆಗಳ ಜೊತೆಗೆ ಏರ್ಟೆಲ್ ನಿಂದ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಏರ್ಟೆಲ್ ಒಪ್ಪಂದ ಮಾಡಿಕೊಂಡ ವಿಮಾನಯಾನ ಸಂಸ್ಥೆಗಳ ವಿಮಾನಗಳಲ್ಲಿ ಪ್ರಯಾಣಿಸುವಾಗ ಕರೆ, ಎಸ್ಎಂಎಸ್, ಡೇಟಾ ಸೇವೆಗಳನ್ನು ಪಡೆದುಕೊಳ್ಳಬಹುದು.
ವಿಮಾನ ಪ್ರಯಾಣದ ಸಂದರ್ಭದಲ್ಲಿ ನೆಟ್ವರ್ಕ್ ಲಭ್ಯ ಇರುವುದಿಲ್ಲ. ಮೊಬೈಲ್ ಗಳಿಂದ ಹೊರ ಸುಸುವ ಎಲೆಕ್ಟ್ರೋಮ್ಯಾಗ್ನೆಟಿಕ್ ಮತ್ತು ರೇಡಿಯೋ ತರಂಗಗಳಿಂದ ವಿಮಾನ ಚಾಲನೆಗೆ ಬಳಕೆಯಾಗುವ ಉಪಕರಣಗಳಿಗೆ ತೊಂದರೆ ಆಗುವ ಸಾಧ್ಯತೆ ಕಾರಣಕ್ಕೆ ಟೇಕಾಫ್ ಮತ್ತು ಲ್ಯಾಂಡಿಂಗ್ ಸಂದರ್ಭದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಲು ವಿಮಾನ ಸಿಬ್ಬಂದಿ ತಿಳಿಸುತ್ತಾರೆ.
ಇನ್ ಫ್ಲೈಟ್ ಕನೆಕ್ಟಿವಿಟಿ ಮೂಲಕ ಪ್ರಯಾಣಿಕರಿಗೆ ಮೊಬೈಲ್ ಸೇವೆ ನೀಡಲಾಗುತ್ತಿದೆ. ಜಿಯೋ ಈ ಮೊದಲೇ ಈ ಸೇವೆಯನ್ನು ಒದಗಿಸಿದ್ದು, ಈಗ ಸ್ಪರ್ಧಾತ್ಮಕ ದರದಲ್ಲಿ ಏರ್ಟೆಲ್ ಸೌಲಭ್ಯ ನೀಡಲು ಮುಂದಾಗಿದೆ. ಒಂದು ದಿನದ ಮಾನ್ಯತೆ ಅವಧಿಯ 195 ರೂ., 295 ರೂ., 595 ರೂ. ಬೆಲೆಯ 3 ರೋಮಿಂಗ್ ಪ್ಯಾಕೇಜ್ ಗಳನ್ನು ಏರ್ಟೆಲ್ ಘೋಷಿಸಿದೆ.