ಬೆಂಗಳೂರು : ಪ್ರೇಮಿ ಕಾಟಕ್ಕೆ ಬೇಸತ್ತು ನಿಶ್ಚಿತಾರ್ಥ ಆಗಿದ್ದ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರು ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಗೊಟ್ಟಿಗೆರೆ ಗ್ರಾಮದಲ್ಲಿ ನಡೆದಿದೆ.
ಪ್ರೀತಿಸಿದ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಂದ್ರಕಲಾ (19) ನೇಣು ಬಿಗಿದುಕೊಂಡ ಯುವತಿ.
ಚಂದ್ರಕಲಾ ಪಕ್ಕದ ಮನೆಯ ಅರುಣ್ ಕುಮಾರ್ ಎಂಬಾತನನ್ನು ಲವ್ ಮಾಡುತ್ತಿದ್ದಳು. ಮನೆಯವರಿಗೆ ಪ್ರೀತಿಯ ವಿಷಯ ಗೊತ್ತಾಗಿ ಹುಡುಗಿಗೆ ಬುದ್ದಿವಾದ ಹೇಳಿದ್ದರು. ಹುಡುಗ ಸರಿ ಇಲ್ಲ, ಮದುವೆ ಆಗಬೇಡ ಎಂದು ಹುಡುಗಿಯ ಮನವೊಲಿಸಿದ್ದರು. ನಂತರ ಇನ್ನೊಬ್ಬ ಹುಡುಗನನ್ನು ನೋಡಿ ಚಂದ್ರಕಲಾಗೆ ನಿಶ್ಚಿತಾರ್ಥ ಮಾಡಿದ್ದರು.
ಬಳಿಕ ಜಿಗಣೆ ಬಳಿಯ ನಂಜಾಪುರದ ನೆಂಟರ ಮನೆಗೆ ಹೋಗಿದ್ದ ಚಂದ್ರಕಲಾ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಮಾಜಿ ಪ್ರಿಯಕರ ಅರುಣ್ ಕುಮಾರ್ ನಮ್ಮ ಮಗಳ ಆತ್ಮಹತ್ಯೆಗೆ ಕಾರಣ, ಬೇರೆ ಹುಡುಗನನ್ನು ಮದುವೆಯಾದರೆ ನಿನ್ನನ್ನು ಸಾಯಿಸುತ್ತೀನಿ ಎಂದು ಬೆದರಿಕೆ ಹಾಕಿದ್ದನು. ಮಗಳ ಸಾವಿಗೆ ಅರುಣ್ ಕಾರಣ ಎಂದು ಹುಡುಗಿ ಪೋಷಕರು ದೂರು ನೀಡಿದ್ದಾರೆ. ಜಿಗಣಿ, ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.