ಚೀನಾದ ಸರ್ಕಾರಿ ಸಂಬಂಧಿತ ಹ್ಯಾಕರ್ ಗುಂಪು ಪ್ರಧಾನಿ ಮೋದಿ ಅವರ ಕಚೇರಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಮತ್ತು ಏರ್ ಇಂಡಿಯಾದಂತಹ ವ್ಯವಹಾರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ಚೀನಾದ ಸಾರ್ವಜನಿಕ ಭದ್ರತಾ ಸಚಿವಾಲಯದ (ಎಂಪಿಎಸ್) ಸೈಬರ್ ಸೆಕ್ಯುರಿಟಿ ಗುತ್ತಿಗೆದಾರ ಐಸೂನ್ ಗೆ ಸಂಬಂಧಿಸಿದ ಸಾವಿರಾರು ದಾಖಲೆಗಳು, ಚಿತ್ರಗಳು ಮತ್ತು ಚಾಟ್ ಸಂದೇಶಗಳನ್ನು ವಾರಾಂತ್ಯದಲ್ಲಿ ಗಿಟ್ಹಬ್ ನಲ್ಲಿ ಅನಾಮಧೇಯವಾಗಿ ಪೋಸ್ಟ್ ಮಾಡಲಾಗಿದೆ.ಫೈಲ್ ಗಳು ಹೇಗೆ ಸೋರಿಕೆಯಾದವು ಎಂಬುದನ್ನು ಕಂಡುಹಿಡಿಯಲು ಐಸೂನ್ ಮತ್ತು ಚೀನಾ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ ಎಂದು ವರದಿಗಳು ತಿಳಿಸಿದೆ.
ಪ್ರಧಾನಿ ಕಚೇರಿ, ವಿತ್ತ- ವಿದೇಶಾಂಗ- ಗೃಹ ಸಚಿವಾಲಯದ ಮಾಹಿತಿಗಳು ಸೋರಿಕೆಯಾಗಿದೆ ಎನ್ನಲಾಗಿದೆ. ಭಾರತ- ಚೀನಾ ನಡು ವೆ ಗಲ್ವಾನ್ ಸಂಘರ್ಷದ ಮಾಹಿತಿಯನ್ನೇ ಕದ್ದಿರುವ ಶಂಕೆಯಿದ್ದು, ಇದಲ್ಲದೇ ರಿಲಯನ್ಸ್, ಏರ್ ಇಂಡಿಯಾ ಮಾಹಿತಿಯನ್ನೂ ಹ್ಯಾಕ್ ಮಾಡಲಾಗಿದೆ ಎನ್ನಲಾಗಿದೆ.
ಚೀನಾ ಸಾರ್ವಜನಿಕ ಭದ್ರತಾ ಸಚಿವಾಲಯವು ಐ ಸೂನ್ ಎಂಬ ಸೈಬರ್ ಸೆಕ್ಯೂರಿಟಿ ಕಂಪನಿಯ ಸೇವೆಯನ್ನು ಗುತ್ತಿಗೆ ಪಡೆದುಕೊಂಡಿದೆ. ಐಸೂನ್ ತಂತ್ರಜ್ಞರು ಭಾರತ ಸರ್ಕಾರಕ್ಕೆ ಸಂಬಂಧಿಸಿದ ವಿವಿಧ ದತ್ತಾಂಶಗಳನ್ನು ಹ್ಯಾಕ್ ಮಾಡಿ ಚೀನಾ ಸರ್ಕಾರಕ್ಕೆ ನೀಡಿದ್ದಾರೆ ಎನ್ನಲಾಗಿದೆ.ಈ ಬಗ್ಗೆ ತನಿಖೆ ನಡೆಯುತ್ತಿದೆ.