ಬೆಂಗಳೂರು: ಉಪನೋಂದಣಾಧಿಕಾರಿ ಅಧಿಕಾರಿ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುವ ಸ್ಟ್ಯಾಂಪ್ ವೆಂಡರ್ ಗಳು ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆದಲ್ಲಿ ಮತ್ತು ಅಧಿಕಾರಿಗಳ ಹೆಸರಲ್ಲಿ ಹಣ ವಸೂಲಿ ಮಾಡಿದಲ್ಲಿ ಕಾನೂನು ರೀತಿ ಕ್ರಮ ಕೈಗೊಂಡು ಅವರ ಪರವಾನಿಗೆ ರದ್ದುಪಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಕರ್ನಾಟಕ ನೋಂದಣಿ ತಿದ್ದುಪಡಿ ವಿಧೇಯಕ 2024 ಮಂಡಿಸಿದ ಸಚಿವರು ವಿವರಣೆ ನೀಡಿದ್ದಾರೆ. ನಿಗದಿತ ಮೊತ್ತಕ್ಕಿಂತ ಹೆಚ್ಚು ಹಣ ವಸೂಲಿ ಪ್ರಕರಣಗಳು ಗಮನಕ್ಕೆ ಬಂದಿವೆ. ಈ ಕುರಿತು ಸಬ್ ರಿಜಿಸ್ಟ್ರಾರ್ ಜೊತೆಗೆ ಹಾಗೂ ಉಪ ನೋಂದಣಾಧಿಕಾರಿಗಳ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ಅವರು ತಮಗೂ ದಸ್ತು ಬರಹಗಾರರಿಗೂ ಯಾವುದೇ ಸಂಬಂಧವಿಲ್ಲ. ನೀವು ಯಾವುದೇ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.
ಹೀಗಾಗಿ ನಿಗದಿತ ಶುಲ್ಕಕ್ಕಿಂತ ಹೆಚ್ಚು ಹಣ ಪಡೆಯುವ ಮತ್ತು ಅಧಿಕಾರಿಗಳ ಹೆಸರಲ್ಲಿ ಹಣ ವಸೂಲಿ ಮಾಡುವ ದಸ್ತು ಬರಹಗಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಜೊತೆಗೆ ಅವರ ಪರವಾನಿಗೆ ರದ್ದು ಪಡಿಸಲಾಗುತ್ತದೆ. ಸಾರ್ವಜನಿಕರು ದೂರು ಸಲ್ಲಿಸಲು ಸಹಾಯವಾಣಿ ಸಂಖ್ಯೆ 080 68265316 ಸಂಪರ್ಕಿಸಬಹುದು ಎಂದು ಹೇಳಿದ್ದಾರೆ.