ಸಾಲ ಅಂದಾಗ ನಮಗೆ ಹಣದ ನೆನಪಾಗುತ್ತೆ. ಹಿಂದಿನ ಕಾಲದಲ್ಲಿ ನೋಟು, ನಾಣ್ಯಗಳು ಚಾಲ್ತಿಯಲ್ಲಿ ಇಲ್ಲದ ಸಮಯದಲ್ಲಿ ವಸ್ತುಗಳನ್ನು ವಿನಿಯಮ ಮಾಡಿಕೊಳ್ತಿದ್ದರು. ಈ ಪದ್ಧತಿ ಈಗ್ಲೂ ಜಾರಿಯಲ್ಲಿದೆ. ಅದು ಮತ್ತೆಲ್ಲೂ ಅಲ್ಲ ಕೈದಿಗಳು ವಾಸಿಸುವ ಜೈಲಿನಲ್ಲಿ.
ಉತ್ತರ ಪ್ರದೇಶದ ದಾಸ್ನಾ ಜೈಲಿನಲ್ಲಿ ನೀವು ಟೊಮೆಟೊ, ನಿಂಬೆ, ಮೆಣಸಿನಕಾಯಿಯನ್ನು ಸಾಲದ ರೂಪದಲ್ಲಿ ಕೊಡೋದು, ಪಡೆಯೋದನ್ನು ನೋಡಬಹುದು. ಜೈಲಿನಲ್ಲಿ ಮಸಾಲೆಯುಕ್ತ ಆಹಾರ ಇರೋದಿಲ್ಲ. ಸಪ್ಪೆ ಆಹಾರ ತಿನ್ನಲು ಕೈದಿಗಳಿಗೆ ಇಷ್ಟವಾಗೋದಿಲ್ಲ.
ಹಾಗಾಗಿ ಅವರು ಸಲಾಡ್ ತಯಾರಿಸಿ ತಿನ್ನುತ್ತಾರೆ. ಈ ಸಲಾಡ್ ಗೆ ಬೇಕಾದ ಆಹಾರ ಪದಾರ್ಥಗಳನ್ನು ಒಬ್ಬರಿಗೊಬ್ಬರು ಉದ್ರಿ ರೂಪದಲ್ಲಿ ನೀಡ್ತಾರೆ. ವಿಚಾರಣಾಧೀನ ಕೈದಿಗಳನ್ನು ಅವರ ಸಂಬಂಧಿಕರು ವಾರಕ್ಕೆ ಎರಡು ಬಾರಿ ಭೇಟಿ ಆಗ್ಬಹುದು. ಶಿಕ್ಷೆಗೊಳಗಾದ ಕೈದಿಗಳನ್ನು ವಾರಕ್ಕೆ ಒಮ್ಮೆ ಮಾತ್ರ ನೋಡುವ ಅವಕಾಶ ಸಂಬಂಧಿಕರಿಗಿರುತ್ತದೆ. ವಿಚಾರಣಾಧೀನ ಕೈದಿಗಳನ್ನು ಭೇಟಿಯಾಗಲು ಬರುವ ಜನರು ಹೆಚ್ಚಿನ ಪ್ರಮಾಣದಲ್ಲಿ ಟೊಮೊಟೊ, ನಿಂಬೆ ಹಣ್ಣು ಮತ್ತು ಮೆಣಸಿನಕಾಯಿ, ಈರುಳ್ಳಿಯನ್ನು ತರ್ತಾರೆ. ಆ ಕೈದಿಗಳು, ಶಿಕ್ಷೆಗೊಳಗಾದ ಕೈದಿಗಳಿಗೆ ಇದನ್ನು ನೀಡ್ತಾರೆ. ಶಿಕ್ಷೆಗೊಳಗಾದ ಕೈದಿಗಳು ಅದನ್ನು ವಾಪಸ್ ಮಾಡ್ಬೇಕು. ಮಾಡದೆ ಹೋದ್ರೆ ಅಥವಾ ತಡವಾದ್ರೆ ಬಡ್ಡಿ ರೂಪದಲ್ಲಿ ಹೆಚ್ಚಿನ ಪದಾರ್ಥ ನೀಡಬೇಕು. ಪ್ರತಿ ದಿನ ಸರಾಸರಿ 600 ಮಂದಿ ದಸ್ನಾ ಜೈಲಿಗೆ ಭೇಟಿ ನೀಡ್ತಾರೆ. ಅವರಲ್ಲಿ 500 ಜನರ ಕೈನಲ್ಲಿ ಸಲಾಡ್ ಗೆ ಅಗತ್ಯವಿರುವ ವಸ್ತುಗಳಿರುತ್ತವೆ.
ವಿಶೇಷವೆಂದ್ರೆ ಈ ಜೈಲಿನ ಮುಂದೆ ಹಣ್ಣಿನ ಅಂಗಡಿ ಜೊತೆ ಟೊಮೊಟೊ, ಮೆಣಸಿನಕಾಯಿ, ಈರುಳ್ಳಿ ಮತ್ತು ನಿಂಬೆ ಹಣ್ಣನ್ನು ಮಾತ್ರ ಮಾರಾಟ ಮಾಡಲಾಗುತ್ತದೆ. ಅದೂ ಬೆಳಿಗ್ಗೆ ಒಂಭತ್ತು ಗಂಟೆಯಿಂದ ಒಂದು ಗಂಟೆಯವರೆಗೆ ಮಾತ್ರ ಮಾರುಕಟ್ಟೆ ತೆರೆದಿರುತ್ತದೆ. ಇಲ್ಲಿನ ಕೈದಿಗಳಿಗೆ ಭಾನುವಾರ ವಿಶೇಷ ಆಹಾರ ನೀಡಲಾಗುತ್ತದೆ.