ದಾವಣಗೆರೆ : ರಾಷ್ಟ್ರಕವಿ ಕುವೆಂಪುರವರ ಮಂತ್ರ ಮಾಂಗಲ್ಯ ಧಾರಣೆಯಂತೆ ಮಹಿಳಾ ನಿಲಯದ ದಿವ್ಯ ಎಂ ಇವರ ಮದುವೆಯು ಚಿತ್ರದುರ್ಗ ತಾಲ್ಲೂಕಿನ ಮುದ್ದಾಪುರ ಗ್ರಾಮದ ನಾಗರಾಜ.ಟಿ ಇವರೊಂದಿಗೆ ಬುಧವಾರ ದಾವಣಗೆರೆ ರಾಮನಗರದಲ್ಲಿನ ರಾಜ್ಯ ಮಹಿಳಾ ನಿಲಯದಲ್ಲಿ ಅತ್ಯಂತ ಸರಳ, ಕ್ರಮಬದ್ದವಾಗಿ ಮದುವೆ ನಡೆದು ಅಧಿಕಾರಿಗಳು ಬೀಗರಾಗಿ ಭಾಗವಹಿಸಿ ಎಲ್ಲಾ ಮದುವೆ ಶಾಸ್ತ್ರಗಳನ್ನು ಪೂರೈಸಿ ನವ ದಂಪತಿಗಳಿಗೆ ಶುಭ ಹಾರೈಸಿದರು.
ನೂತನ ದಂಪತಿಗಳಿಗೆ ಶುಭ ಹಾರೈಸಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್.ಎಂ.ವಿ. ಮಾತನಾಡಿ ಕುವೆಂಪುರವರು ಹಾಕಿ ಕೊಟ್ಟಿರುವಂತಹ ಸರಳವಾದ ಮಂತ್ರ ಮಾಂಗಲ್ಯದಲ್ಲಿ ಇಬ್ಬರು ನವ ದಂಪತಿಗಳು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮದುವೆ ಬಹಳ ವಿಶೇಷವಾಗಿ ಇಡೀ ಸಮಾಜಕ್ಕೆ ಮಾದರಿಯಾಗಿದೆ. ವಧು ಕಡೆಯಿಂದ ನಮ್ಮ ಅಧಿಕಾರಿಗಳು ಬಂಧುಗಳಾಗಿ ಕೆಲಸ ನಿರ್ವಹಿಸಿದ್ದಾರೆ. ವರನ ಕಡೆಯಿಂದ ಅವರ ಅಕ್ಕ, ಮಾವಂದಿರು ಭಾಗವಹಿಸಿ ಈ ಮದುವೆಗೆ ಸಾಕ್ಷೀಕರಿಸಿದ್ದಾರೆ. ಇವರು ನವದಂಪತಿಗಳಿಗೆ ಸಂವಿಧಾನ ಪ್ರಸ್ತಾವನೆಯುಳ್ಳ ಪೋಟೋ ಪ್ರೇಮ್ ನೀಡುವ ಮೂಲಕ ಶುಭ ಹಾರೈಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ್.ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಅಪರ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನ್ ಭಾನು.ಎಸ್.ಬಳ್ಳಾರಿ, ಉಪವಿಭಾಗಾಧಿಕಾರಿ ದುರ್ಗಶ್ರೀ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕಿ ವಾಸಂತಿ ಉಪ್ಪಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ; ಷಣ್ಮುಖಪ್ಪ ಹಾಗೂ ಇನ್ನಿತರೆ ಅಧಿಕಾರಿಗಳು ಆಗಮಿಸಿ ವಧುವರರಿಗೆ ಶುಭ ಕೋರಿದರು.
ರಾಜ್ಯ ಮಹಿಳಾ ನಿಲಯದಲ್ಲಿ ಕಳೆದ 5 ವರ್ಷಗಳ ಕಾಲ ಆಶ್ರಯ ಪಡೆದ ದಿವ್ಯ.ಎಂ (24 ವರ್ಷ} ಮತ್ತು ನಾಗರಾಜ ಎಂಬುವರ ಜೊತೆ ವಿಶೇಷ ರೀತಿಯಲ್ಲಿ ಸಾಂಪ್ರದಾಯವನ್ನು ಕೈಬಿಟ್ಟು, ಪುರೋಹಿತರನ್ನು ಕರೆಸದೇ ಸರಳ ವಿಧಾನದಲ್ಲಿ ವಿವಾಹ ಮಹೋತ್ಸವವನ್ನು ನೆರವೇರಿಸಲಾಯಿತು.
ಚಿತ್ರದುರ್ಗ ತಾ; ಮುದ್ದಾಪುರ ಗ್ರಾಮದ ನಿವಾಸಿ ನಾಗರಾಜ್.ಟಿ. ತಂದೆ ದಿವಂಗತ.ತಿಮ್ಮಣ್ಣ ಇವರು ವ್ಯವಸಾಯ ವೃತ್ತಿ ಮಾಡುತ್ತಾರೆ. ಆರ್ಥಿಕವಾಗಿ ಸದೃಡವಾಗಿರುತ್ತಾರೆ. ಇವರಿಗೆ ತಂದೆ, ತಾಯಿ ಇಬ್ಬರೂ ಸಹ ಇರುವುದಿಲ್ಲ. ಅಜ್ಜನ ಜೊತೆ ವಾಸವಿದ್ದಾರೆ. ಕಚೇರಿಯ ಸೂಪರ್ಡೆಂಟ್ ಮಲ್ಲಿಕಾರ್ಜುನ್, ರಾಜ್ಯ ಮಹಿಳಾ ನಿಲಯ ಅಧೀಕ್ಷಕರಾದ ಶಕುಂತಲಾ ಬಿ ಕೋಳೂರ ಉಪಸ್ಥಿತರಿದ್ದರು.ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನಾಗರಾಜ ಸಂವಿಧಾನ ಜಾಗೃತಿ ಜಾಥಾದ ಅಂಗವಾಗಿ ಸಂವಿಧಾನ ಪೀಠಿಕೆ ಓದುವ ಮೂಲಕ ಪ್ರತಿಜ್ಞೆ ಸ್ವೀಕರಿಸಲಾಯಿತು.