
ಧಾರವಾಡ: ಖಾಲಿ ಜಾಗದ ವಿಚಾರವಾಗಿ ಅಣ್ಣ-ತಮ್ಮಂದಿರ ನಡುವೆ ಆರಂಭವಾದ ಆಸ್ತಿ ಕಲಹ ಎರಡು ಗುಂಪುಗಳ ನಡುವೆ ಹೊಡೆದಾಟಕ್ಕೆ ಕಾರಣವಾಗಿದ್ದು, ಗಲಾಟೆಯಲ್ಲಿ ಓರ್ವ ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ತಲವಾಯಿ ಗ್ರಾಮದಲ್ಲಿ ನಡೆದಿದೆ.
ಆಸ್ತಿ ವಿಚಾರವಾಗಿ ಸಹೋದರರ ನಡುವೆ ಆರಂಭವಾದ ಜಗಳ ಬಿಡಿಸಲು ಬಂದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಅಶೋಕ್ ಕಮ್ಮಾರ್ ಹಾಗೂ ಫಕೀರಪ್ಪ ಎಂಬುವವರ ಗುಂಪುಗಳ ನಡುವೆ ಗಲಾಟೆಯಾಗಿ ಹೊಡೆದಾಡಿಕೊಂಡಿದ್ದಾರೆ.
ಮಾರಾಮಾರಿಯಲ್ಲಿ ಅಶೋಕ್ ಕಮ್ಮಾರ್ ಹಾಗೂ ಫಕೀರಪ್ಪ ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಅಶೋಕ್ ಕಮ್ಮಾರ್ ಅವರನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಅಶೋಕ್ ಕಮ್ಮಾರ್ ಎಂಬುವವರು ಮೃತಪಟ್ಟಿದ್ದಾರೆ.
ಗಾಯಾಳು ಫಕೀರಪ್ಪನನ್ನು ಧಾರವಾಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಗ್ರಾಮೀಣ ಪೊಲಿಸ್ ಥಾಣೆಯಲ್ಲಿ ಪ್ರಕರಣ ದಾಖಲಾಗಿದೆ.