ಬೆಂಗಳೂರು: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಡದೇ ಇರುವವರು ರಾಷ್ಟ್ರವಾದಿಗಳಾಗಲು ಹೇಗೆಸಾಧ್ಯ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ರಾಜ್ಯಪಾಲರ ಭಾಷಣದ ಮೇಲೆ ವಿಧಾನಪರಿಷತ್ ನಲ್ಲಿ ನಡೆದ ಚರ್ಚೆಗೆ ಉತ್ತರ ನೀಡುವ ವೇಳೆ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ನ ರಾಷ್ಟ್ರೀಯವಾದಿ ಹೋರಾಟ ಮತ್ತು ಚಳುವಳಿಯ ಚರಿತ್ರೆಯನ್ನು ವಿವರಿಸುತ್ತಾ ಬಿಜೆಪಿ ಹಾಗೂ ಆರ್ ಎಸ್ ಎಸ್ ನಾಯಕರಿಗೆ ಟಾಂಗ್ ನೀಡಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾಗಿ, ಜೈಲು ಸೇರಿದ ಕಾಂಗ್ರೆಸ್ಸಿನವರೇ ನಿಜವಾದ ರಾಷ್ಟ್ರೀಯವಾದಿಗಳು. ಸ್ವಾತಂತ್ರ್ಯ ಹೋರಾಟದಲ್ಲಿ ಅಪ್ಪಿ ತಪ್ಪಿಯೂ ಭಾಗವಹಿಸದ ಜನಸಂಘ ಮತ್ತು ಬಿಜೆಪಿ ಪರಿವಾರದವರು ರಾಷ್ಟ್ರೀಯವಾದಿಗಳಾ? ಎಂದು ಬಿಜೆಪಿಯನ್ನು ಟೀಕಿಸಿದರು.
ದೇಶದ ಸ್ವಾತಂತ್ರ್ಯಕ್ಕಾಗಿ ಜೈಲು ಸೇರಿದವರು, ಹುತಾತ್ಮರಾದವರು, ಬ್ರಿಟಿಷರಿಂದ ಹಿಂಸೆ ಅನುಭವಿಸಿದವರು ಕಾಂಗ್ರೆಸ್ಸಿನವರು. ಬಿಜೆಪಿ ಪರಿವಾರದವರಿಗೆ ಸ್ವಾತಂತ್ರ್ಯ ಹೋರಾಟದ ಚರಿತ್ರೆಯೇ ಇಲ್ಲ. ಅವರು ದೇಶಕ್ಕಾಗಿ ಹೋರಾಡಿದ ಚರಿತ್ರೆಯೇ ಇಲ್ಲ. ನಮ್ಮ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಈಗ ಇವರು ರಾಷ್ಟ್ರೀಯವಾದಿಗಳು ಎಂದು ಹೇಳಿಕೊಳ್ಳುತ್ತಿದ್ದಾರೆ. ಆದರೆ ಭಾರತದ ಇತಿಹಾಸ ಮತ್ತು ಚರಿತ್ರೆಯಲ್ಲಿ ಯಾರು ನಿಜವಾದ ರಾಷ್ಟ್ರೀಯವಾದಿಗಳು ಎನ್ನುವುದು ದಾಖಲಾಗಿದೆ ಎಂದರು.