ನವದೆಹಲಿ: ಮಗುವನ್ನು ದತ್ತು ಪಡೆಯುವುದು ಮೂಲಭೂತ ಹಕ್ಕಲ್ಲ ಎಂದು ದೆಹಲಿ ಹೈಕೋರ್ಟ್ ಹೇಳಿದೆ. ಸಂವಿಧಾನದ 21ನೇ ವಿಧಿಯಡಿ ಮೂಲಭೂತ ಹಕ್ಕಿನ ಸ್ಥಾನ ಮಾನ ನೀಡಲು ಸಾಧ್ಯವಿಲ್ಲ. ಯಾರನ್ನು ದತ್ತು ಪಡೆದುಕೊಳ್ಳಬೇಕು ಎಂದು ನಿರ್ಧರಿಸುವ ಹಕ್ಕು ದತ್ತು ಪಡೆಯುವ ಭಾವಿ ಪಾಲಕರಿಗೆ ಇಲ್ಲವೆಂದು ದೆಹಲಿ ಹೈಕೋರ್ಟ್ ಇತ್ತೀಚಿನ ಆದೇಶದಲ್ಲಿ ಹೇಳಿದೆ.
ಒಬ್ಬರು ಅಥವಾ ಹೆಚ್ಚು ಮಕ್ಕಳನ್ನು ಹೊಂದಿರುವ ಹೆತ್ತವರು ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಅಥವಾ ದೈಹಿಕ, ಮಾನಸಿಕ ಅಸಾಮರ್ಥ್ಯದ ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದು ಎಂಬ ನಿಯಮ ಪೂರ್ವಾನ್ವಯಗೊಳಿಸುವುದನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಮಣಿಯಂ ಪ್ರಸಾದ್ ಎತ್ತಿ ಹಿಡಿದಿದ್ದಾರೆ.
ಮಕ್ಕಳ ಹಿತದೃಷ್ಟಿಯಿಂದ ಈ ಪ್ರಕ್ರಿಯೆ ಸರಿ ಇದೆ. ಭಾವಿ ಪಾಲಕರ ಹಕ್ಕನ್ನು ಆದ್ಯತೆ ಮೇಲೆ ಪ್ರತಿಪಾದಿಸುವಂತಿಲ್ಲ. ಜನರು ವಿಕಲಚೇತನ ಮಕ್ಕಳನ್ನು ದತ್ತು ಪಡೆಯುವ ಸಾಧ್ಯತೆ ಕಡಿಮೆ. ವಿಕಲಚೇತನರನ್ನು ದತ್ತು ಪಡೆಯುವುದಕ್ಕೆ ಪ್ರೋತ್ಸಾಹ ನೀಡುವುದು ಕಾನೂನಿನ ಉದ್ದೇಶವಾಗಿದೆ ಎಂದು ಹೇಳಿದ್ದಾರೆ.