ಬೆಂಗಳೂರು : ಸಿದ್ದರಾಮಯ್ಯ ರಾಜ್ಯಭಾರದಲ್ಲಿ ಜನವಿರೋಧಿ “ತುಘಲಕ್ ದರ್ಬಾರ್’’ ನಡೆಯುತ್ತಿದೆ ಎಂದು ಮಾಜಿ ಶಾಸಕ ಸಿ.ಟಿ ರವಿ ವಾಗ್ಧಾಳಿ ನಡೆಸಿದ್ದಾರೆ. ಟ್ವೀಟ್ ಮಾಡಿರುವ ಸಿ.ಟಿ ರವಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರಾಜ್ಯಕ್ಕೆ ಸಂಬಂಧವೇ ಇಲ್ಲದ ವಿಚಾರವೊಂದಕ್ಕೆ 15 ಲಕ್ಷ ರೂಪಾಯಿ ವ್ಯಯಿಸುವ ಈ ರಾಜ್ಯ ಸರ್ಕಾರ “ಯಾರದ್ದೋ ಮದುವೆಯಲ್ಲಿ ಉಂಡವನೆ ಜಾಣ” ಎಂಬ ಗಾದೆಗೆ ಅನ್ವರ್ಥನಾಮವಾಗಿದೆ “ನನ್ನ ತೆರಿಗೆ ನನ್ನ ಹಕ್ಕು” “ನಮ್ಮ ದುಡ್ಡು ಇನ್ಯಾರಿಗೋ ಯಾಕೆ ಕೊಡಬೇಕು?”ಎಂದು ಎದೆ ತಟ್ಟಿಕೊಂಡು ಸುಳ್ಳೇ ನಾಟಕ ಮಾಡುವ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಮತ್ತವರ ಪರಿವಾರಗಣ ಯಾಕೆ ಕೇರಳದ ಕಾಂಗ್ರೆಸ್ ಸಂಸದನ ತಾಳಕ್ಕೆ ಏಕೆ ಕುಣಿಯುತ್ತಿದೆ? ತನ್ನ “ಧಣಿಗಳ” ಮನ ಮೆಚ್ಚಿಸಲು ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರ ರಾಜ್ಯದ ಜನರಿಗೆ ನಿರಂತರವಾಗಿ ವಿಶ್ವಾಸಘಾತ ಮಾಡುತ್ತಿದೆ.
ನಕಲಿ ಗಾಂಧಿಗಳ ಹಿತಾಸಕ್ತಿಯ ರಕ್ಷಣೆಗೆ ಕನ್ನಡಿಗರು ಎಷ್ಟು ದಿನ ತಮ್ಮ ಹಿತಾಸಕ್ತಿಗಳನ್ನು ಬಲಿ ನೀಡಬೇಕು? ನಕಲಿ ಗಾಂಧಿ ಪರಿವಾರದಲ್ಲಿ ಹುಟ್ಟಿದ್ದಾರೆ ಎನ್ನುವ ಏಕೈಕ ಸಾಧನೆಗೆ, ರಿಲಾಂಚ್ ಮೇಲೆ ರಿಲಾಂಚ್ ಮಾಡಿದರೂ ಉಡಾವಣೆಯಾಗದ ರಾಕೆಟ್ ನ ಹಾಗಿರುವ, ನಿಮ್ಮ ಅಧಿನಾಯಕನ ಆದೇಶಕ್ಕೆ ಕನ್ನಡಿಗರ ಹಣವನ್ನು ಏಕೆ ಖರ್ಚು ಮಾಡಲಾಗುತ್ತಿದೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೇ?!? ಅಂದ ಹಾಗೆ ರಾಜ್ಯದ ಮಂತ್ರಿಯೊಬ್ಬರ ಅಧಿಕೃತ ಆದೇಶ ಪತ್ರದ ನಕಲನ್ನು ಹೊರ ರಾಜ್ಯದ ಕಾಂಗ್ರೆಸ್ ಪದಾಧಿಕಾರಿಗಳ ಹೆಸರಿನಲ್ಲಿ ಹೊರಡಿಸಿರುವ ಔಚಿತ್ಯ ಏನು? ಶ್ರೀ ಕೆ ಸಿ ವೇಣುಗೋಪಾಲ್ ನಿಮ್ಮ ಸರ್ಕಾರದ ಕೊರಿಯರ್ ಬಾಯ್ ಎನ್ನುವ ಕಾರಣಕ್ಕೋ? ಅಥವಾ ನಿಮ್ಮ ಸರ್ಕಾರದ ಪೆರ್ಸೆಂಟೇಜ್ (ಹೈಕಮಾಂಡ್ ತೆರಿಗೆ) ವ್ಯವಹಾರಕ್ಕೆ ಅನುಕೂಲವಾಗಲಿ ಎಂದೋ? ತನ್ನ ವೈಫಲ್ಯಗಳಿಗೆ ಕೇಂದ್ರ ಸರ್ಕಾರವನ್ನು ಧೂಷಣೆ ಮಾಡುತ್ತಿರುವ ಅಸಮರ್ಥ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಮದರಸಾಗಳಿಗೆ, ವಕ್ಫ್ ಆಸ್ತಿಗಳಿಗೆ, ಮತ್ತು ಇಂಥಹ ಎಡಬಿಡಂಗಿ ವಿಚಾರಗಳಿಗೆ ಖರ್ಚು ಮಾಡುವಲ್ಲಿ ಅಪಾರ ಹಾಗು ವಿಶೇಷ ಆಸಕ್ತಿ ಇರುವಂತೆ ಕಾಣುತ್ತದೆ.
ತುಘಲಕ್ ದರ್ಬಾರ್ ಅನ್ನುವುದನ್ನು ಇತಿಹಾಸದಲ್ಲಿ ಓದಿದ್ದೆವು, ಕೇಳಿದ್ದೆವು ಆದರೆ ಈಗ ಶ್ರೀಮಾನ್ ಸಿದ್ದರಾಮಯ್ಯ ಅವರ ರಾಜ್ಯಭಾರದಲ್ಲಿ ಜನವಿರೋಧಿ “ತುಘಲಕ್ ದರ್ಬಾರ್” ಅನುಭವಿಸಬೇಕಾಗಿ ಬಂದಿದ್ದು ಕನ್ನಡಿಗರ ಪಾಲಿನ ದುರ್ದೈವ ಎಂದು ಮಾಜಿ ಸಚಿವ ಸಿ.ಟಿ ರವಿ ವಾಗ್ಧಾಳಿ ನಡೆಸಿದ್ದಾರೆ.