ಬೆಂಗಳೂರು : 2023ನೇ ಸಾಲಿನ ಮುಂಗಾರು ಹಂಗಾಮಿನ ಬರ ಪರಿಸ್ಥಿತಿಯ ಹಿನ್ನಲೆಯಲ್ಲಿ ರೈತರಿಗೆ ಬೆಳೆಹಾನಿ ಪರಿಹಾರದ ಮೊದಲನೇ ಕಂತಾಗಿ ಅಥವಾ ಎಸ್ಡಿಆರ್ಎಫ್, ಎನ್ಡಿಆರ್ಎಫ್ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರವಾಗಿ ಅರ್ಹತೆಯ ಅನುಗುಣವಾಗಿ ಪ್ರತಿ ರೈತರಿಗೆ ಗರಿಷ್ಟ 2 ಸಾವಿರ ರೂ. ವರೆಗೆ ಪಾವತಿಸಲು ಸರ್ಕಾರವು ನಿರ್ಧರಿಸಿದೆ.
ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರದಿಂದ ಎನ್ಡಿಆರ್ಎಫ್ ಅನುದಾನ ಬಿಡುಗಡೆಯಾದ ನಂತರ ಎಸ್ಡಿಆರ್ಎಫ್ ಮಾರ್ಗಸೂಚಿಗಳ ಪ್ರಕಾರ ಹೆಚ್ಚುವರಿ ಮೊತ್ತಕ್ಕೆ ಅರ್ಹತೆಯಿರುವ ರೈತರಿಗೆ ಹೆಚ್ಚುವರಿ ಬೆಳೆಹಾನಿ ಪರಿಹಾರ ಬಿಡುಗಡೆಗೊಳಿಸಲು ನಿರ್ಧರಿಸಲಾಗಿದೆ.
ಬೆಳೆ ಸಮೀಕ್ಷೆ ದತ್ತಾಂಶದ ಮಾಹಿತಿಯ ಆಧಾರದ ಮೇಲೆ, (FRUITS ID) ಪ್ರೂಟ್ಸ್ ಐಡಿ ಹೊಂದಿರುವ ಮತ್ತು ಪಹಣಿ ಜೋಡಣೆಯಾಗಿರುವ ರೈತರಿಗೆ ಪರಿಹಾರ ತಂತ್ರಾಂಶದ ಮೂಲಕ ಹಂತ-ಹಂತವಾಗಿ ಪರಿಹಾರ ವಿತರಣೆ ಪ್ರಕ್ರಿಯೆಯು ಪ್ರಾರಂಭವಾಗಿದೆ.
ಬೆಳೆ ಹಾನಿ ಪರಿಹಾರ ಪಡೆದುಕೊಳ್ಳಲು (FRUITS ID) ಪ್ರೂಟ್ಸ್ ಐಡಿಗೆ ಪಹಣಿ ಜೋಡಣೆ ಕಡ್ಡಾಯವಾಗಿರುವುದರಿಂದ ಇದುವರೆಗೂ (FRUITS ID) ಪ್ರೂಟ್ಸ್ ಐಡಿ ಮಾಡಿಸಿಕೊಳ್ಳದೇ ಇರುವ ರೈತರು ನಿಗದಿತ ಅವಧಿಯಲ್ಲಿ ತಮ್ಮ ಆಧಾರ್, ಬ್ಯಾಂಕ್ ಖಾತೆಯ ವಿವರ ಹಾಗೂ ಪಹಣಿ ಪತ್ರಿಕೆಗಳ ಮಾಹಿತಿಯನ್ನು ಗ್ರಾಮ ಆಡಳಿತ ಅಧಿಕಾರಿಗಳಿಗೆ ಅಥವಾ ರೈತ ಸಂಪರ್ಕ ಕೇಂದ್ರಗಳಿಗೆ ನೀಡಿ, (FRUITS ID) ಪ್ರೂಟ್ಸ್ ಐಡಿಯನ್ನು ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಅಂತಹ ರೈತರು ಪರಿಹಾರಕ್ಕೆ ಅರ್ಹರಾಗುವುದಿಲ್ಲ.