ಬೆಂಗಳೂರು: ನಾನು ಈ ರಾಜ್ಯದ ಮೇಎ ಮಾಡಿರುವ ಸಾಲ 1.12 ಲಕ್ಷ ಕೋಟಿ ರೂ.ಗಳು ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಇಂದು 2024-25 ನೇ ಸಾಲಿನ ಆಯವ್ಯಯವನ್ನು ಮಂಡಿಸಿದ ನಂತರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಸಾಲ ಮಾಡಿರುವುದಾಗಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳುತ್ತಾರೆ. ನಾನು ಸ್ವಾತಂತ್ರ್ಯ ಬಂದಾಗಿನಿಂದ ಹಣಕಾಸಿನ ಮಂತ್ರಿಯಾಗಿರುವವರೆಗೆ ಈ ರಾಜ್ಯದ ಮೇಲೆ 2,46,000 ಕೋಟಿ ಸಾಲವಿದ್ದು , ನಾನು ಮಾಡಿರುವುದು 1.12 ಲಕ್ಷ ಕೋಟಿ ರೂ.ಗಳು ಮಾತ್ರ. ಇವರ ಬಜೆಟ್ ನಲ್ಲಿ ಕಳೆದ ವರ್ಷ 80 ಸಾವಿರ ಕೋಟಿ ರೂ.ಗಳ ಸಾಲ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ರಾಜ್ಯದ ಬಡವರು, ಮಹಿಳೆಯರು, ಯುವಕರು, ಪರಿಶಿಷ್ಟ ಜಾತಿ, ವರ್ಗದವರು, ಅಲ್ಪಸಂಖ್ಯಾತರಿಗೆ ಕೊಂಡುಕೊಳ್ಳುವ ಶಕ್ತಿ ಹೆಚ್ಚು ಮಾಡುವ ಪ್ರಯತ್ನ ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡುವ ಪ್ರಯತ್ನವೂ ಬಜೆಟ್ ನಲ್ಲಿ ಆಗಿದೆ ಎಂದು ಹೇಳಿದ್ದಾರೆ.
ದೇಶದಲ್ಲಿ ನಿರುದ್ಯೋಗ, ಹಣದುಬ್ಬರ ಸಮಸ್ಯೆಗಳಿಂದ ಬಡವರು ಜೀವನ ಸಾಗಿಸುವುದು ಕಷ್ಟವಾಗಿದೆ. ಬಡವರ ಕೊಳ್ಳುವ ಶಕ್ತಿಯನ್ನು ಹೆಚ್ಚು ಮಾಡಲು ಗ್ಯಾರಂಟಿ ಯೋಜನೆಗಳನ್ನು ರೂಪಿಸಲಾಗಿದೆ. ಈ ಆರ್ಥಿಕ ವರ್ಷದಲ್ಲಿ ನಾವು ಅಧಿಕಾರಕ್ಕೆ ಬಂದು 9 ತಿಂಗಳಾಗುವ ಮೊದಲೇ ಜನತೆಗೆ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಲಾಗಿದೆ. ಇದರೊಂದಿಗೆ ಕೃಷಿ, ನೀರಾವರಿ, ಲೋಕೋಪಯೋಗಿ, ಇಂಧನ, ಗ್ರಾಮೀಣಾಭಿವೃದ್ಧಿ, ಬರಗಾಲ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ದೃಷ್ಟಿಯಿಂದ ಹಾಗೂ ಅಭಿವೃದ್ಧಿಗೆ ಹಣ ಕೊಡುವ ಕೆಲಸವನ್ನೂ ಮಾಡಲಾಗಿದೆ ಎಂದರು.