ಬೆಂಗಳೂರು : ಸಾರ್ವಜನಿಕರೇ ಗಮನಿಸಿ…ಸ್ಥಳೀಯವಾಗಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರಲು ‘ಆಫೀಸ್ ಆಫ್ ದಿ ಒಎಸ್ಡಿ ಟು ಸಿಎಂ ಕರ್ನಾಟಕ’ (@osd_cmkarnataka) ಟ್ವಿಟರ್ ಖಾತೆಗೆ ಟ್ಯಾಗ್ ಮಾಡಬಹುದಾಗಿದೆ.
ಈ ಬಗ್ಗೆ ಸರ್ಕಾರ ಪ್ರಕಟಣೆ ಹೊರಡಿಸಿದ್ದು, ”ಹಾವೇರಿ ಜಿಲ್ಲೆಯ ಯಲಗಚ್ಚು ಗ್ರಾಮದ ಬಸವರಾಜ ವೆಂಕಟ ಎಂಬ ವ್ಯಕ್ತಿಯು ಹೆತ್ತ ತಾಯಿಗೆ ಅನ್ನ ಹಾಕಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ ಎಂಬ ವರದಿಗೆ ಸಂಬಂಧಿಸಿದಂತೆ ಕೂಲಂಕುಷವಾಗಿ ಪರಿಶೀಲನೆ ನಡೆಸಲಾಗಿರುತ್ತದೆ. ಈ ವೇಳೆ ನಮಗೆ ತಿಳಿದು ಬಂದಿರುವುದೇನೆಂದರೆ, ಈ ಕುಟುಂಬದವರು ಬಿಪಿಎಲ್ ಕಾರ್ಡ್ ಫಲಾನುಭವಿಗಳಾಗಿದ್ದು, ಪ್ರತಿ ತಿಂಗಳು ಉಚಿತವಾಗಿ 15 ಕೆ.ಜಿ ಅಕ್ಕಿ ಪಡೆಯುತ್ತಿದ್ದು, ಅನ್ನಭಾಗ್ಯ ಯೋಜನೆಯಿಂದ 510 ರೂ.ಗಳನ್ನು ಪ್ರತಿ ತಿಂಗಳು ಡಿ.ಟಿ.ಬಿ ಮುಖಾಂತರ ಹಣ ಪಾವತಿಯಾಗಿರುತ್ತದೆ”.
”ಅಲ್ಲದೇ, ಸರ್ಕಾರ ಯೋಜನೆಯಡಿ ಮನೆ ಹಂಚಿಕೆಯಾಗಿ ಸ್ವಂತ ಮನೆಯಲ್ಲಿ ವಾಸವಾಗಿದ್ದು, ನರೇಗಾ ಉದ್ಯೋಗ ಖಾತ್ರಿ ಗುರುತಿನ ಚೀಟಿ ಹಂಚಿಕೆಯಾಗಿರುತ್ತದೆ. ಮಾತ್ರವಲ್ಲದೇ, ಗೃಹ ಲಕ್ಷ್ಮೀ, ಗೃಹ ಜ್ಯೋತಿ ಯೋಜನೆಯ ಫಲಾನುಭವಿಯಾಗಿರುತ್ತಾರೆ. ಸ್ಥಳೀಯವಾಗಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ನಮ್ಮ ಗಮನಕ್ಕೆ ತರಲು ‘ಆಫೀಸ್ ಆಫ್ ದಿ ಒಎಸ್ಡಿ ಟು ಸಿಎಂ ಕರ್ನಾಟಕ’ (@osd_cmkarnataka) ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿ” ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.