
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಚಿಪ್ಳಿ ಲಿಂಗದಹಳ್ಳಿ ಗ್ರಾಮದಲ್ಲಿ ಬುಧವಾರ ಸಂಜೆ ಖಾಸಗಿ ಶಾಲೆ ಬಸ್ ಚಕ್ರಕ್ಕೆ ಸಿಲುಕಿದ ನಾಡ ಬಾಂಬ್ ಸ್ಫೋಟಗೊಂಡಿದೆ. ಅದೃಷ್ಟವಶಾತ್ ವಾಹನದಲ್ಲಿದ್ದವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.
ಖಾಸಗಿ ಶಾಲೆ ಬಸ್ ನ ಹಿಂಬದಿ ಟೈಯರ್ ಗೆ ನಾಡ ಬಾಂಬ್ ಸಿಕ್ಕು ಸ್ಪೋಟಗೊಂಡಿದ್ದು, ಭಾರಿ ಶಬ್ದ ಉಂಟಾಗಿದೆ. ಸ್ಪೋಟದ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿ ಬಂದ ಅಕ್ಕಪಕ್ಕದ ಮನೆಯವರು ಗ್ರಾಮಾಂತರ ಠಾಣೆ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ನಾಡ ಬಾಂಬ್ ಚೂರುಗಳು, ಕಲ್ಲಿನ ತುಂಡುಗಳು ಕಂಡುಬಂದಿವೆ. ಹಂದಿ ಅಥವಾ ಕೆರೆಯಲ್ಲಿ ಮೀನು ಬೇಟೆಗೆ ಬಳಸುವ ನಾಡ ಬಾಂಬ್ ಇದಾಗಿರಬಹುದು. ಬೇರೆಡೆಗೆ ತೆಗೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಬಿದ್ದಿರಬಹುದು ಎಂದು ಹೇಳಲಾಗಿದೆ. ಪೊಲೀಸರು ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ.