ಸ್ಮಾರ್ಟ್ಫೋನ್ಗಳು ಈಗ ನಮ್ಮ ದೈನಂದಿನ ಜೀವನದ ಪ್ರಮುಖ ಭಾಗವಾಗಿ ಮಾರ್ಪಟ್ಟಿವೆ. ದಿನವಿಡೀ ಫೋನ್ ಸ್ಕ್ರೋಲ್ ಮಾಡುತ್ತಲೇ ಇರುವ ಎಷ್ಟೋ ಜನರಿದ್ದಾರೆ. ಕೆಲವರಿಗೆ ವಿಡಿಯೋ ಗೇಮ್ಗಳ ಹುಚ್ಚು, ಇನ್ನು ಕೆಲವರು ಸಾಮಾಜಿಕ ಜಾಲತಾಣಗಳನ್ನು ಸ್ಕ್ರೋಲ್ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ. ವರದಿಯೊಂದರ ಪ್ರಕಾರ ಸರಾಸರಿ ಭಾರತೀಯ ಬಳಕೆದಾರರು ದಿನಕ್ಕೆ 70-80 ಬಾರಿ ತಮ್ಮ ಫೋನ್ ಅನ್ನು ಸ್ಪರ್ಶಿಸುತ್ತಾರೆ. ಇವರಲ್ಲಿ ಅರ್ಧದಷ್ಟು ಜನರು ಯಾವುದೇ ನಿರ್ದಿಷ್ಟ ಕಾರಣವಿಲ್ಲದೇ ಫೋನ್ ಚೆಕ್ ಮಾಡುವ ಅಭ್ಯಾಸ ಮಾಡಿಕೊಂಡಿದ್ದಾರೆ.
ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ವರದಿಯ ಪ್ರಕಾರ ಪ್ರತಿ ಬಾರಿ ಸ್ಮಾರ್ಟ್ಫೋನ್ ಸ್ಪರ್ಶಿಸಿದಾಗ, ಅರ್ಧಕ್ಕಿಂತ ಹೆಚ್ಚು ಬಾರಿ ಯಾವ ಕಾರಣಕ್ಕೆ ಫೋನ್ ಬಳಸುತ್ತಿದ್ದೇವೆ ಎಂಬುದೇ ತಿಳಿದಿರುವುದಿಲ್ಲ. 50-55 ಪ್ರತಿಶತ ಫೋನ್ ಬಳಕೆದಾರರ ಸ್ಥಿತಿ ಈ ರೀತಿಯಾಗಿದೆ. ಶೇ.45-50ರಷ್ಟು ಬಾರಿ ಮಾತ್ರ ನಿರ್ದಿಷ್ಟ ಕೆಲಸಕ್ಕಾಗಿ ಫೋನ್ ಬಳಸುತ್ತಾರೆ.
ಈ ಮಾಹಿತಿಯು 1,000 ಕ್ಕೂ ಹೆಚ್ಚು ಬಳಕೆದಾರರ ನೈಜ ಡೇಟಾವನ್ನು ಒಳಗೊಂಡಿದೆ. ಈ ಸಂಶೋಧನೆಯ ಪ್ರಕಾರ ಅರ್ಧದಷ್ಟು ಜನರು ಫೋನ್ ಬಳಸುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಶಕಗಳಲ್ಲಿ ಸ್ಮಾರ್ಟ್ಫೋನ್ಗಳನ್ನು ಬಳಸುವ ವಿಧಾನಗಳು ಹೆಚ್ಚಾಗಿವೆ. ಈ ಮೊದಲು ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಮಾತನಾಡಲು ಮಾತ್ರ ಫೋನ್ ಬಳಸಲಾಗುತ್ತಿತ್ತು. ಆದರೆ ಈಗ ಹತ್ತಾರು ಉದ್ದೇಶಗಳಿಗಾಗಿ ಬಳಸಲಾಗುತ್ತದೆ.
ಹಾಡುಗಳನ್ನು ಕೇಳುವುದು ಮತ್ತು ಚಲನಚಿತ್ರಗಳನ್ನು ನೋಡುವುದು. ಆನ್ಲೈನ್ನಲ್ಲಿ ಸರಕುಗಳನ್ನು ಖರೀದಿ, ಮಾಹಿತಿ ಪತ್ತೆ, ಗೇಮ್ಸ್, ಹಣ ಪಾವತಿ, ಸುದ್ದಿ ವೀಕ್ಷಣೆ, ರೀಡಿಂಗ್, ಪ್ರಮುಖ ಮಾಹಿತಿ ನಿರ್ವಹಣೆ ಮತ್ತು ಟ್ರ್ಯಾಕ್ ಮಾಡುವುದು ಹೀಗೆ ಫೋನ್ ಇಲ್ಲದೆ ಬದುಕೇ ಇಲ್ಲ ಎಂಬ ಸ್ಥಿತಿಗೆ ಬಳಕೆದಾರರು ಬಂದುಬಿಟ್ಟಿದ್ದಾರೆ.