ನವದೆಹಲಿ: ಸೌರ ವಿದ್ಯುತ್ ಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಪಿಎಂ ಸೂರ್ಯ ಘರ್ ಯೋಜನೆಗೆ ಚಾಲನೆ ನೀಡಲಾಗಿದೆ. ದೇಶಾದ್ಯಂತ ಒಂದು ಕೋಟಿ ಕುಟುಂಬಗಳಿಗೆ ಪ್ರತಿ ತಿಂಗಳು 300 ಯುನಿಟ್ ವರೆಗೆ ಉಚಿತ ವಿದ್ಯುತ್ ಪೂರೈಸುವುದು ಪ್ರಮುಖ ಉದ್ದೇಶವಾಗಿದೆ. ಇದಕ್ಕಾಗಿ 75,000 ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ತೊಡಗಿಸಲಾಗುತ್ತದೆ.
ಈ ಯೋಜನೆಯಡಿ ಕನಿಷ್ಠ ಸಬ್ಸಿಡಿ 18,000 ರೂ., ಗರಿಷ್ಠ ಸಬ್ಸಿಡಿ 78,000 ರೂ. ಆಗಿದ್ದು 1 ಕೆವಿ ಘಟಕಕ್ಕೆ ಅಂದಾಜು ವೆಚ್ಚ 47 ಸಾವಿರ ರೂಪಾಯಿ ನಿಗದಿಪಡಿಸಲಾಗಿದೆ. ಈ ಯೋಜನೆಯಿಂದ ತಿಂಗಳಿಗೆ 300 ಯುನಿಟ್ ವರೆಗೆ ಉಚಿತ ವಿದ್ಯುತ್ ಪಡೆಯಬಹುದು. ಮನೆಗಳ ಮೇಲ್ಛಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಲಿದ್ದು, ಸರ್ಕಾರದಿಂದ ಶೇಕಡ 60ರಷ್ಟು ಸಹಾಯಧನ ಸಿಗಲಿದೆ.
ಜನಸಾಮಾನ್ಯರ ವಿದ್ಯುತ್ ಬಿಲ್ ನಲ್ಲಿ ಕಡಿತವಾಗಲಿದ್ದು ಇಂಧನ ಭದ್ರತೆಯಲ್ಲಿ ಹೆಚ್ಚಳವಾಗುತ್ತದೆ. ಹೊಸ ಉದ್ಯೋಗಗಳು ಸೃಷ್ಟಿಯಾಗಲಿದ್ದು, ಪರಿಸರ ಮಾಲಿನ್ಯಕ್ಕೂ ಕಡಿವಾಣ ಹಾಕಬಹುದು. ರೂಫ್ ಟಾಪ್ ಸೋಲಾರ್ ಮೂಲಕ ದೇಶದ ಒಂದು ಕೋಟಿ ಮನೆಗಳಿಗೆ ಉಚಿತ ವಿದ್ಯುತ್ ಒದಗಿಸುವುದು ಪ್ರಧಾನಮಂತ್ರಿ ಸೂರ್ಯ ಘರ್ ಯೋಜನೆಯ ಉದ್ದೇಶವಾಗಿದೆ. ಮನೆ ಮೇಲೆ ಸೌರ ವಿದ್ಯುತ್ ಫಲಕ ಅಳವಡಿಸಲು ಅವಕಾಶವಿರುವವರು https://pmsuryaghar.gov.in ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬಹುದು.