ಗಾಝಾ ಮೇಲಿನ ಯುದ್ಧ ಮುಗಿಯುವವರೆಗೂ ಲೆಬನಾನ್ ಸಶಸ್ತ್ರ ಗುಂಪು ಇಸ್ರೇಲ್ನೊಂದಿಗಿನ ಗಡಿ ಪ್ರದೇಶಗಳಲ್ಲಿ ತನ್ನ ದಾಳಿಯನ್ನು ನಿಲ್ಲಿಸುವುದಿಲ್ಲ ಎಂದು ಹಿಜ್ಬುಲ್ಲಾ ನಾಯಕ ಸಯ್ಯದ್ ಹಸನ್ ನಸ್ರಲ್ಲಾ ಹೇಳಿದ್ದಾರೆ.
ಸ್ಥಳೀಯ ಟಿವಿ ಚಾನೆಲ್ ಅಲ್-ಮನಾರ್ ಮಂಗಳವಾರ ಪ್ರಸಾರ ಮಾಡಿದ ಹಿಜ್ಬುಲ್ಲಾ ಹೋರಾಟಗಾರರನ್ನು ಸ್ಮರಿಸುವ ಭಾಷಣದಲ್ಲಿ ನಸ್ರಲ್ಲಾ ಅವರು “ಗಾಝಾ ಮೇಲಿನ ಝಿಯೋನಿಸ್ಟ್ ಯುದ್ಧ ಮುಗಿಯುವ ಮೊದಲು ಗುಂಪು ಗಡಿ ದಾಳಿಯನ್ನು ನಿಲ್ಲಿಸುವುದಿಲ್ಲ” ಎಂದು ಹೇಳಿದರು ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಗಾಝಾದಲ್ಲಿ ತನ್ನ ಆಕ್ರಮಣವನ್ನು ನಿಲ್ಲಿಸಬೇಕು ಎಂದು ಮನವರಿಕೆಯಾಗುವವರೆಗೆ ಇಸ್ರೇಲಿ ಶತ್ರುವನ್ನು ದುರ್ಬಲಗೊಳಿಸುವ ಗುರಿಯನ್ನು ದಕ್ಷಿಣ ಲೆಬನಾನ್ನಲ್ಲಿರುವ ಗುಂಪಿನ ಮಿಲಿಟರಿ ಫ್ರಂಟ್ ಹೊಂದಿದೆ ಎಂದು ನಸ್ರಲ್ಲಾ ತಿಳಿಸಿದ್ದಾರೆ.
ಲೆಬನಾನ್ ಅನ್ನು ಇಸ್ರೇಲಿ ಆಕ್ರಮಣದಿಂದ ರಕ್ಷಿಸುವ ರಾಷ್ಟ್ರೀಯ ಕರ್ತವ್ಯವೂ ಹಿಜ್ಬುಲ್ಲಾಗೆ ಇದೆ ಮತ್ತು ಇಸ್ರೇಲ್ ದಾಳಿಗಳು ಮುಂದುವರಿದರೆ ಪ್ರತಿಯಾಗಿ ಹೋರಾಡುವುದನ್ನು ಮುಂದುವರಿಸುತ್ತದೆ ಎಂದು ನಸ್ರಲ್ಲಾ ಹೇಳಿದರು.
ಹಿಂದಿನ ದಿನ ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಬೆಂಬಲಿಸಿ ಲೆಬನಾನ್ ಸಶಸ್ತ್ರ ಗುಂಪು ಹೆಜ್ಬುಲ್ಲಾ ಇಸ್ರೇಲ್ ಕಡೆಗೆ ಡಜನ್ಗಟ್ಟಲೆ ರಾಕೆಟ್ಗಳನ್ನು ಹಾರಿಸಿದ ನಂತರ ಲೆಬನಾನ್-ಇಸ್ರೇಲ್ ಗಡಿಯು ಅಕ್ಟೋಬರ್ 8, 2023 ರಿಂದ ಹೆಚ್ಚಿನ ಉದ್ವಿಗ್ನತೆಗೆ ಸಾಕ್ಷಿಯಾಗಿದೆ.