ಬೆಂಗಳೂರು : 20 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದ ಪ್ರಧಾನಿ ಮೋದಿ ಅವರೇ 20 ಕೋಟಿ ಉದ್ಯೋಗ ಎಲ್ಲಿ..? ಎಂದು ಪ್ರಧಾನಿ ಮೋದಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.
2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್.ಸಿ.ಆರ್.ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಕರ್ನಾಟಕವೊಂದರಲ್ಲೇ 2021ರಲ್ಲಿ 1,129 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆಲ್ಲಿಯ ರೋಜಗಾರ್ ಮೇಳ ಪ್ರಧಾನಿ ಮೋದಿಅವರೇ?
ಉದ್ಯೋಗ ಅರಸಿ, ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ಈ ವಿಮಾನದಲ್ಲಿ 66 ಮಂದಿ ಗುಜರಾತಿಗಳಿದ್ದರು. ತಮ್ಮನ್ನು ಗುಜರಾತಿನಿಂದ ಅಮೆರಿಕಾಗೆ ಅಕ್ರಮವಾಗಿ ಕರೆದೊಯ್ಯಲು ಏಜೆಂಟ್ ಗಳಿಗೆ ತಲಾ 60 – 80 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂಬ ಅಂಶ ವಿಚಾರಣೆಯಲ್ಲಿ ಬಹಿರಂಗವಾಗಿತ್ತು. 2018 ರಿಂದ 2019ರ ವರೆಗೆ 8,027 ಮಂದಿ, 2019 ರಿಂದ 2020ರ ವರೆಗೆ 19,883 ಮಂದಿ, 2020 ರಿಂದ 2021ರ ವರೆಗೆ 30,662 ಮಂದಿ, 2021 ರಿಂದ 2022ರ ವರೆಗೆ 63,927 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ. ಈ ಅಕ್ರಮ ವಲಸಿಗರ ಪೈಕಿ ಬಹುಪಾಲು ಜನರು ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ ಅಲ್ಲವೇ?ಎಂದು ಸಿಎಂ ಸಿದ್ದರಾಮಯ್ಯ ವಾಗ್ಧಾಳಿ ನಡೆಸಿದ್ದಾರೆ.