ನವದೆಹಲಿ: ದೆಹಲಿಗೆ ಪ್ರತಿಭಟನೆ ನಡೆಸಲು ಹೋಗದಂತೆ ತಡೆಯಲು ನಿರ್ಮಿಸಲಾದ ಬ್ಯಾರಿಕೇಡ್ ಗಳು ಮತ್ತು ಸಿಮೆಂಟ್ ಸ್ಲ್ಯಾಬ್ಗಳನ್ನು ಬಲವಂತವಾಗಿ ತೆಗೆದುಹಾಕಲು ಪ್ರಯತ್ನಿಸಿದ ನಂತರ ಹರಿಯಾಣ ಪೊಲೀಸರು ಮಂಗಳವಾರ ಪಂಜಾಬ್ ಗಡಿಯ ಶಂಭುನಲ್ಲಿ ಪ್ರತಿಭಟನಾ ನಿರತ ರೈತರನ್ನು ವಶಕ್ಕೆ ಪಡೆದರು.
200 ಕ್ಕೂ ಹೆಚ್ಚು ರೈತ ಸಂಘಗಳು ‘ದೆಹಲಿ ಚಲೋ’ ಪ್ರತಿಭಟನಾ ಮೆರವಣಿಗೆಯನ್ನು ಮುಂದುವರಿಸಲು ನಿರ್ಧರಿಸಿದ್ದು, ದೆಹಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೆಹಲಿಗೆ ತೆರಳುತ್ತಿದ್ದ ಪ್ರತಿಭಟನಾ ನಿರತ ರೈತರಿಗೆ ಪಂಜಾಬ್ ಪೊಲೀಸರು ರಾಜ್ಪುರ ಬೈಪಾಸ್ ದಾಟಲು ಅವಕಾಶ ನೀಡಿದರು. ಪ್ರತಿಭಟನಾ ನಿರತ ರೈತರು ತಮ್ಮ ಟ್ರಾಕ್ಟರುಗಳೊಂದಿಗೆ ಸಿಮೆಂಟ್ ಬ್ಯಾರಿಕೇಡ್ಗಳನ್ನು ಮುರಿಯಲು ಪ್ರಯತ್ನಿಸಿದ್ದರಿಂದ ಪಂಜಾಬ್-ಹರಿಯಾಣ ಶಂಭು ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ರೈತರು ಕಲ್ಲು ತೂರಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ.