ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿದ್ದ ವ್ಯಕ್ತಿಯನ್ನು ವಿಧಾನಸೌಧ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮುನೇಗೌಡ(50) ಬಂಧಿತ ಆರೋಪಿ. ದೊಡ್ಡಬಳ್ಳಾಪುರದ ಮುನೇಗೌಡ ತನ್ನ ಚಾಲನಾ ಪರವಾನಿಗೆ ನವೀಕರಣಕ್ಕೆ ಆರ್.ಟಿ.ಒ.ಗೆ ಅರ್ಜಿ ಸಲ್ಲಿಸಿದ್ದು, ಅನೇಕ ದಿನಗಳಾದರೂ ಡಿಎಲ್ ಸಿಕ್ಕಿರಲಿಲ್ಲ. ಹಲವು ಬಾರಿ ಆರ್‌ಟಿಒ ಕಚೇರಿ ಅಧಿಕಾರಿಗಳನ್ನು ಸಂಪರ್ಕಿಸಿದ್ದರೂ ಸ್ಪಂದಿಸಿರಲಿಲ್ಲ. ಇದರಿಂದ ನೊಂದ ಮುನೇಗೌಡ ಫೆಬ್ರವರಿ 8ರಂದು ವಿಧಾನಸೌಧ ಎದುರು ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಅಹವಾಲು ಸಲ್ಲಿಸಲು ಬಂದಿದ್ದ.
ಸೂಕ್ತ ರೀತಿ ಆತನ ಅಹವಾಲು ಆಲಿಸದ ಅಧಿಕಾರಿಗಳ ವಿರುದ್ಧ ಸಿಟ್ಟಾದ ಮುನೇಗೌಡ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ಸಚಿವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದ ಮುನೇಗೌಡನನ್ನು ಬಂಧಿಸಿದ್ದಾರೆ.