ರಾಯಚೂರು: ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ಕೃಷ್ಣಾ ನದಿ ಪಾತ್ರದಲ್ಲಿ ಅಕ್ರಮ ಮರಳು ದಂಧೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕಿ ಕರೆಮ್ಮ ಜಿ. ನಾಯಕ ಅವರ ಪುತ್ರ ಸಂತೋಷ್ ಮತ್ತು ಅವರ ಸಹೋದರ ತಿಮ್ಮಾರೆಡ್ಡಿ ಪೊಲೀಸ್ ಕಾನ್ಸ್ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾಗಿ ದೂರು ದಾಖಲಾಗಿದೆ.
ದೊಂಡಂಬಳಿ ಮತ್ತು ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಅಕ್ರಮ ಮರಳು ದಂಧೆ ನಡಿಯುತ್ತಿದ್ದು, ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಅಶೋಕ ಸದಲಗಿ ಸೂಚನೆ ಮೇರೆಗೆ ಪೊಲೀಸ್ ಕಾನ್ಸ್ಟೇಬಲ್ ಹನುಮಂತ ಬೊಮ್ಮನಹಳ್ಳಿ ಅವರು ಘಟನಾ ಸ್ಥಳಕ್ಕೆ ಹೋಗಿ ಅಕ್ರಮ ಮರಳುದಂಧೆಕೋರರಿಗೆ ಎಚ್ಚರಿಕೆ ನೀಡಿ ಬಂದಿದ್ದಾರೆ.
ಬೆಂಬಲಿಗರಿಂದ ಈ ವಿಷಯ ತಿಳಿದ ಶಾಸಕ ಕರೆಮ್ಮ ಜಿ. ನಾಯಕ್ ಅವರ ಪುತ್ರ ಸಂತೋಷ್ ನಾಯಕ್ ಮತ್ತು ಶಾಸಕಿಯ ಸಹೋದರ ತಿಮ್ಮ ರೆಡ್ಡಿ ಅವರು ಪ್ರವಾಸಿ ಮಂದಿರಕ್ಕೆ ಪೊಲೀಸ್ ಕಾನ್ಸ್ಟೇಬಲ್ ಹನುಮಂತ ಅವರನ್ನು ಕರೆಸಿಕೊಂಡು ಥಳಿಸಿದ್ದಾರೆ ಎಂದು ದೂರು ನೀಡಲಾಗಿದೆ. ಹಲ್ಲೆಗೊಳಗಾದ ಹನುಮಂತ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.