ಬೆಂಗಳೂರು: ಶಿಕ್ಷಕರ ವರ್ಗಾವಣೆಗೆ ಶಿಕ್ಷಣ ಇಲಾಖೆ ವತಿಯಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದರೂ, ಲೋಕಸಭೆ ಚುನಾವಣೆ ನೀತಿ ಸಂಹಿತೆ ಎದುರಾಗುವುದರಿಂದ ನಿಗದಿತ ಕಾಲಕ್ಕೆ ಈ ಬಾರಿಯೂ ವರ್ಗಾವಣೆ ಪ್ರಕ್ರಿಯೆ ನಡೆಯುವುದು ಅನುಮಾನವಾಗಿದೆ. ಶೈಕ್ಷಣಿಕ ವರ್ಷ ಮಧ್ಯದಲ್ಲಿ ಶಿಕ್ಷಕರ ವರ್ಗಾವಣೆ ನಡೆಯುವ ಸಾಧ್ಯತೆ ಇದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಕರ ವರ್ಗಾವಣೆಗೆ ತಿದ್ದುಪಡಿ ತರಲು ಅಗತ್ಯ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈಗಾಗಲೇ ವಿಧಾನಪರಿಷತ್ ಶಿಕ್ಷಕರ ಕ್ಷೇತ್ರದ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿದೆ.
ವರ್ಗಾವಣೆ ಸಂಬಂಧ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ- ತಿದ್ದುಪಡಿ) ಅಧಿನಿಯಮ -2022ಕ್ಕೆ ತಿದ್ದುಪಡಿ ತಂದು ಪ್ರಕ್ರಿಯೆಗೆ ಚಾಲನೆ ನೀಡುವ ವೇಳೆಗೆ ಲೋಕಸಭೆ ಚುನಾವಣೆ ನೀತಿ ಸಂಹಿತೆ ಅಡ್ಡಿಯಾಗಲಿದೆ.
ಕಳೆದ ವರ್ಷ ಸಾಮಾನ್ಯ ವರ್ಗಾವಣೆ ನಡೆದಿತ್ತು. ಈ ಬಾರಿ ಕಡ್ಡಾಯ ಮತ್ತು ಪರಸ್ಪರ ವರ್ಗಾವಣೆ ನಡೆಯಬೇಕಿದೆ. ಕನಿಷ್ಠ 10 ವರ್ಷ ಮೇಲ್ಪಟ್ಟು ಒಂದೇ ಕಡೆ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಕಡ್ಡಾಯವಾಗಿ ವರ್ಗಾವಣೆ ಮಾಡಲಾಗುತ್ತದೆ. ನೀತಿ ಸಂಹಿತೆ ಕಾರಣ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.