ಶಿವಮೊಗ್ಗ: ಅನುದಾನ ದುರುಪಯೋಗ ಆರೋಪದ ಮೇಲೆ ಕುವೆಂಪು ವಿಶ್ವವಿದ್ಯಾಲಯ ನಿವೃತ್ತ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ ಸೇರಿ ಐವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲು ಸಮಾಜ ಕಲ್ಯಾಣ ಇಲಾಖೆ ಸರ್ಕಾರದ ಕಾರ್ಯದರ್ಶಿ ಎಂ. ಸುಮಿತ್ರ ಸೂಚಿಸಿದ್ದಾರೆ.
ಕುವೆಂಪು ವಿವಿಯಲ್ಲಿ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ರೂಂ ಸೌಲಭ್ಯ ಒದಗಿಸಲು 2021- 22ನೇ ಸಾಲಿನಲ್ಲಿ 4.25 ಕೋಟಿ ರೂಪಾಯಿ ಎಸ್.ಸಿ.ಎಸ್.ಪಿ. ಅನುದಾನ ಬಿಡುಗಡೆ ಮಾಡಲಾಗಿತ್ತು. ಈ ಅನುದಾನವನ್ನು ದುರುಪಯೋಗಪಡಿಸಿಕೊಂಡ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ನಿರ್ದೇಶನ ನೀಡಲಾಗಿದೆ.
ಪ್ರೊ. ಬಿ.ಪಿ. ವೀರಭದ್ರಪ್ಪ, ಹಿಂದಿನ ಕುಲಸಚಿವರಾದ ಕೆಎಎಸ್ ಅಧಿಕಾರಿ ಜಿ. ಅನುರಾಧ, ಹಿಂದಿನ ಪ್ರಭಾರ ಕುಲಸಚಿವ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಸಿ. ಗೀತಾ, ಹಿಂದಿನ ಹಣಕಾಸು ಅಧಿಕಾರಿಗಳಾದ ಎಸ್. ರಾಮಕೃಷ್ಣ, ಸ್ನಾತಕೋತ್ತರ ಜೈವಿಕ ತಂತ್ರಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ. ವೈ.ಎಲ್. ರಾಮಚಂದ್ರ ಅವರ ವಿರುದ್ಧ ಕ್ರಿಮಿನಲ್ ಪ್ರಕರಣದೊಂದಿಗೆ ಕಲಂ 409 ಸೇರ್ಪಡೆ ಮಾಡಲು ತಿಳಿಸಲಾಗಿದೆ.
ಸಮಾಜ ಸೇವಕ ಶಶಿ ನೆಲ್ಲಿಸರ ಅವರು ವಿವಿ ಸ್ಮಾರ್ಟ್ ಕ್ಲಾಸ್ ರೂಂನಲ್ಲಿ ನಡೆದ ಹಗರಣದ ಕುರಿತಾಗಿ ದೂರು ನೀಡಿದ್ದರು.