ಬೆಂಗಳೂರು: ಹಿಂದಿನ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ, ರಾಷ್ಟ್ರೀಯ ಶಿಕ್ಷಣ ನೀತಿ(NEP)ಯಡಿ ರಾಜ್ಯ ಉನ್ನತ ಶಿಕ್ಷಣದಲ್ಲಿ ಪರಿಚಯಿಸಿದ 4 ವರ್ಷದ ಪದವಿ, ಬಹು ಐಚ್ಛಿಕ ವಿಷಯಗಳ ಆಯ್ಕೆಯ ಅವಕಾಶಗಳನ್ನು ಪ್ರಸ್ತುತ ಕಾಂಗ್ರೆಸ್ ಸರ್ಕಾರ 2024- 25ನೇ ಸಾಲಿನಿಂದ ಕೈ ಬಿಡುವುದು ಖಚಿತವಾಗಿದೆ.
ಎನ್ಇಪಿ ಅಡಿ ಪರಿಚಯಿಸಿದ್ಧ ಕೋರ್ಸ್ ಕೈ ಬಿಡುವ ಶಿಫಾರಸಿಗೆ ಉನ್ನತ ಶಿಕ್ಷಣ ಇಲಾಖೆ ಅಸ್ತು ಎಂದಿದ್ದು ಮುಖ್ಯಮಂತ್ರಿಗಳ ಒಪ್ಪಿಗೆ ಬಾಕಿ ಇದೆ.
ಕಳೆದ ಸರ್ಕಾರ ಎನ್‌ಇಪಿ ಜಾರಿ ಮಾಡಿದ್ದು, ರಾಜ್ಯದಲ್ಲಿ ಪದವಿ ಅವಧಿ ಮೂರು ವರ್ಷದಿಂದ ನಾಲ್ಕು ವರ್ಷಕ್ಕೆ ಏರಿಕೆಯಾಗಿತ್ತು. ಎನ್ಇಪಿ ಜಾರಿ ವೇಳೆ ಪದವಿ ಸೇರಿದವರು ಪ್ರಸ್ತುತ ಮೂರನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿದ್ದಾರೆ. ಇವರ ನಾಲ್ಕನೇ ವರ್ಷದ ವ್ಯಾಸಂಗ ತಪ್ಪಿಸಲು ಮಧ್ಯಂತರ ಆದೇಶ ನೀಡವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಎನ್ಇಪಿ ಬದಲಿಗೆ ರಾಜ್ಯ ಶಿಕ್ಷಣ ನೀತಿ ಜಾರಿಗೆ ತರಲು ಅಗತ್ಯ ಕರಡು ರಚಿಸುವಂತೆ ಈಗಿನ ಕಾಂಗ್ರೆಸ್ ಸರ್ಕಾರ ರಚಿಸಿದ್ದ ಡಾ ಸುಖದೇವ್ ಥೋರಟ್ ನೇತೃತ್ವದ ಆಯೋಗ ಮಧ್ಯಂತರ ವರದಿಯಲ್ಲಿ ನಾಲ್ಕು ವರ್ಷದ ಪದವಿ ಬಹು ವಿಷಯಗಳ ಆಯ್ಕೆಯ ಅಂಶಗಳನ್ನು ಕೈ ಬಿಡಲು ಶಿಫಾರಸು ಮಾಡಿದ್ದು, ಈ ಮಧ್ಯಂತರ ವರದಿಗೆ ಉನ್ನತ ಶಿಕ್ಷಣ ಇಲಾಖೆ ಒಪ್ಪಿಗೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕೃತ ಒಪ್ಪಿಗೆ ಬಾಕಿ ಇದೆ.