ಚಾಕೊಲೇಟ್, ಐಸ್ ಕ್ರೀಂ ಅಥವಾ ತಂಪು ಪಾನೀಯ ಹೀಗೆ ಒಂದಿಲ್ಲೊಂದು ಸಿಹಿಪದಾರ್ಥಗಳನ್ನು ಸೇವಿಸಬೇಕೆಂದು ಎಲ್ಲರಿಗೂ ಆಸೆಯಾಗುತ್ತದೆ. ಆದರೆ ಹೆಚ್ಚು ಸಕ್ಕರೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಹಾಗಾದರೆ ಸಕ್ಕರೆ ಅಷ್ಟೊಂದು ವಿಷಕಾರಿಯೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಸಕ್ಕರೆ ನಿಜವಾಗಿಯೂ ಏನೆಂದು ಮೊದಲು ತಿಳಿದುಕೊಳ್ಳುವುದು ಮುಖ್ಯ. ಸಕ್ಕರೆ ಕಾರ್ಬೋಹೈಡ್ರೇಟ್ ಆಗಿದ್ದು, ದೇಹವು ಇದನ್ನು ಗ್ಲೂಕೋಸ್ ಆಗಿ ವಿಭಜಿಸುತ್ತದೆ. ಗ್ಲೂಕೋಸ್ ನಮ್ಮ ದೇಹದ ಜೀವಕೋಶಗಳಿಗೆ ಮುಖ್ಯ ಮೂಲವಾಗಿದೆ. ನಮ್ಮ ಆಹಾರದಲ್ಲಿ ಇರುವ ಹೆಚ್ಚಿನ ಸಕ್ಕರೆ ‘ಡೈಸ್ಯಾಕರೈಡ್’, ಎರಡು ಮೊನೊಸ್ಯಾಕರೈಡ್‌ಗಳಿಂದ ಮಾಡಲ್ಪಟ್ಟಿದೆ. ಸಕ್ಕರೆ ನಮ್ಮ ದೇಹದ ಶಕ್ತಿಯ ಮುಖ್ಯ ಮೂಲವಾಗಿದ್ದರೆ ಅದು ಆರೋಗ್ಯಕ್ಕೆ ಮಾರಕ ಹೇಗೆ ಎಂಬ ಗೊಂದಲ ಕಾಡುತ್ತದೆ.
ಅತಿಯಾದ ಸಿಹಿ ಹಾನಿಕಾರಕ
ಸಕ್ಕರೆಯಲ್ಲಿ ಎರಡು ವಿಧಗಳಿವೆ. ಮೊದಲನೆಯದನ್ನು ನೈಸರ್ಗಿಕ ಮೂಲಗಳಿಂದ ಪಡೆಯುವಂಥದ್ದು, ಎರಡನೆಯದು ಉತ್ಪಾದಕರಿಂದ ತಯಾರಿಸಲ್ಪಡುವುದು. ಸಕ್ಕರೆ ಅತ್ಯಂತ ರುಚಿಕರ ಆಹಾರ. ಕೆಲವೊಂದು ಆಹಾರ ಪದಾರ್ಥಗಳನ್ನು ಇದು ದೀರ್ಘಕಾಲ ಸಂರಕ್ಷಿಸಿ ಇಡಬಲ್ಲದು. ಇದಲ್ಲದೆ ಕೇಕ್ ಮೇಲೆ ಐಸಿಂಗ್ ಅಥವಾ ಸಿಹಿ ಅಲಂಕಾರಗಳಿಗಾಗಿ ಸಕ್ಕರೆಯನ್ನು ಬಳಸುತ್ತೇವೆ. ಆದರೆ ವಾಸ್ತವವಾಗಿ ನಮ್ಮ ಆಹಾರದಲ್ಲಿ ಹೆಚ್ಚುವರಿ ಸಕ್ಕರೆಯ ಅಗತ್ಯವಿಲ್ಲ. ನೈಸರ್ಗಿಕವಾಗಿ ಸಿಗುವ ಸಕ್ಕರೆ ನಮಗೆ ಸಾಕು.
ಕಾರ್ಬೋಹೈಡ್ರೇಟ್‌ಗಳು ಹೇಗೆ ಹಾನಿಕಾರಕ?
ಕಾರ್ಬೋಹೈಡ್ರೇಟ್‌ಗಳನ್ನು ಸೇವಿಸಿದಾಗ ನಮ್ಮ ಜೀರ್ಣಾಂಗ ವ್ಯವಸ್ಥೆಯು ಅವುಗಳನ್ನು ಸಣ್ಣ ತುಂಡುಗಳಾಗಿ ಒಡೆಯುತ್ತದೆ ಮತ್ತು ಅವು ಅಂತಿಮವಾಗಿ ಗ್ಲೂಕೋಸ್ ಅಣುಗಳಾಗುತ್ತವೆ. ಈ ಗ್ಲೂಕೋಸ್ ಅಣುಗಳು ಸಣ್ಣ ಕರುಳಿನ ಗೋಡೆಗಳ ಮೂಲಕ ಹಾದುಹೋಗುತ್ತವೆ ಮತ್ತು ರಕ್ತಪ್ರವಾಹಕ್ಕೆ ಸೇರುತ್ತವೆ. ಜೀವಕೋಶಗಳು ಅವುಗಳನ್ನು ಶಕ್ತಿಗಾಗಿ ಬಳಸುತ್ತವೆ. ಗ್ಲೂಕೋಸ್ ಶಕ್ತಿಯನ್ನು ಪಡೆಯಲು ತ್ವರಿತ ಮತ್ತು ಸುಲಭವಾದ ಮಾರ್ಗ. ಆದರೆ ಇಲ್ಲಿಯೂ ಸಮತೋಲನ ಮುಖ್ಯ. ಹೆಚ್ಚು ಅಥವಾ ಕಡಿಮೆ ಗ್ಲೂಕೋಸ್ ಸಮಸ್ಯೆಗಳಿಗೆ ಕಾರಣವಾಗಬಹುದು.
ರಕ್ತದಲ್ಲಿ ಸಕ್ಕರೆಯ ಪ್ರಮಾಣ ಅಧಿಕವಾಗಿದ್ದರೆ ಅನೇಕ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ರಕ್ತದಲ್ಲಿ ಸಕ್ಕರೆಯ ಮಟ್ಟವು ಹೆಚ್ಚಾದಾಗ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಎಂಬ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ.
ಆದರೆ ಕಾಲಾನಂತರದಲ್ಲಿ ಜೀವಕೋಶಗಳು ಇನ್ಸುಲಿನ್‌ಗೆ ಸ್ಥಿರವಾಗಿ ಪ್ರತಿಕ್ರಿಯಿಸುವುದನ್ನು ನಿಲ್ಲಿಸಬಹುದು, ಇದು ಇನ್ಸುಲಿನ್ ಪ್ರತಿರೋಧಕ್ಕೆ ಕಾರಣವಾಗುತ್ತದೆ. ಆಗ ಮೇದೋಜ್ಜೀರಕ ಗ್ರಂಥಿಯು ಹೆಚ್ಚು ಇನ್ಸುಲಿನ್ ಅನ್ನು ಉತ್ಪಾದಿಸುತ್ತದೆ. ಏರುತ್ತಿರುವ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಾಧ್ಯವಾಗುವುದಿಲ್ಲ.
ಯಕೃತ್ತು ಮತ್ತು ಸ್ನಾಯುಗಳು ಸ್ವಲ್ಪ ಸಕ್ಕರೆಯನ್ನು ಸಂಗ್ರಹಿಸಬಹುದು. ಅವು ತುಂಬಿದಾಗ ಯಕೃತ್ತು ಹೆಚ್ಚುವರಿ ಸಕ್ಕರೆಯನ್ನು ಕೊಬ್ಬಿನ ಕೋಶಗಳಿಗೆ ಕಳುಹಿಸುತ್ತದೆ. ಇದು ತೂಕ ಹೆಚ್ಚಾಗುವುದು, ಬೊಜ್ಜು, ಹಲ್ಲಿನ ಸಮಸ್ಯೆಗಳು, ಪ್ರಿ-ಡಯಾಬಿಟಿಸ್ ಮತ್ತು ಟೈಪ್ -2 ಮಧುಮೇಹಕ್ಕೆ ಕಾರಣವಾಗುತ್ತದೆ.
ಸಕ್ಕರೆಯಿಂದ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸುವುದು ಹೇಗೆ?
ಸರಳವಾಗಿ ಹೇಳುವುದಾದರೆ ಸಕ್ಕರೆಯಲ್ಲಿ ಎರಡು ವಿಧ. ಉತ್ತಮ ಸಕ್ಕರೆ ಎಂದರೆ ಸಂಸ್ಕರಿಸದೇ ಇರವುದು. ನೈಸರ್ಗಿಕ ಆಹಾರಗಳಾದ ಹಣ್ಣುಗಳು, ತರಕಾರಿಗಳು ಮತ್ತು ಡೈರಿ ಉತ್ಪನ್ನಗಳಲ್ಲಿ ಇದು ಕಂಡುಬರುತ್ತದೆ. ಈ ಸಕ್ಕರೆಗಳ ಜೊತೆಗೆ ಫೈಬರ್, ವಿಟಮಿನ್‌ಗಳು ಮತ್ತು ಇತರ ಪೋಷಕಾಂಶಗಳು ಸಮತೋಲಿತ ಆಹಾರಕ್ಕೆ ಸಹಾಯ ಮಾಡುತ್ತವೆ.
ಕೆಟ್ಟ ಸಕ್ಕರೆ ಎಂದರೆ ಸಂಸ್ಕರಿಸಿದ ಆಹಾರಗಳು ಮತ್ತು ಪಾನೀಯಗಳಿಗೆ ಸೇರಿಸುವ ಸಿಹಿ. ಈ ಸಕ್ಕರೆ ಆ ಆಹಾರದಲ್ಲಿ ನೈಸರ್ಗಿಕವಾಗಿ ಇರುವುದಿಲ್ಲ. ಇವುಗಳ ಸೇವನೆಯನ್ನು ಕಡಿಮೆ ಮಾಡಬೇಕು.