ಪಾಕಿಸ್ತಾನ ವಿರೋಧಿ ಭಾಷಣ ಮಾಡಿದ ಆರೋಪದ ಮೇಲೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಸಹೋದರಿ ಅಲೀಮಾ ಖಾನ್ ಅವರಿಗೆ ಫೆಡರಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎಫ್ಐಎ) ಸಮನ್ಸ್ ಜಾರಿ ಮಾಡಿದೆ.
ಜನರು ಮತ್ತು ಪಾಕಿಸ್ತಾನಿ ಸಶಸ್ತ್ರ ಪಡೆಗಳ ನಡುವೆ “ವಿಭಜನೆಯನ್ನು ಸೃಷ್ಟಿಸಿದ” ಆರೋಪದ ಮೇಲೆ ಎಫ್ಐಎ ಅವರ ವಿರುದ್ಧ ತನಿಖೆಯನ್ನು ಪ್ರಾರಂಭಿಸಿದೆ ಮತ್ತು ಫೆಬ್ರವರಿ 6 ರಂದು ಬೆಳಿಗ್ಗೆ 11 ಗಂಟೆಗೆ (ಸ್ಥಳೀಯ ಸಮಯ) ಅಲೀಮಾ ಅವರಿಗೆ ಸಮನ್ಸ್ ನೀಡಿದೆ.
ಆಂತರಿಕ ಸಚಿವಾಲಯದ ಕೋರಿಕೆಯ ಮೇರೆಗೆ ಎಫ್ಐಎ ಸೆಕ್ಷನ್ ಅಧಿಕಾರಿ ಅಲೀಮಾ ವಿರುದ್ಧ ತನಿಖೆ ಆರಂಭಿಸಿದ್ದಾರೆ ಎಂದು ಸಹಾಯಕ ನಿರ್ದೇಶಕ ಇಜಾಜ್ ಅಹ್ಮದ್ ಶೇಖ್ ಹೊರಡಿಸಿದ ನೋಟಿಸ್ ನಲ್ಲಿ ತಿಳಿಸಲಾಗಿದೆ.
ಕ್ರಿಮಿನಲ್ ಪಿತೂರಿ ಮತ್ತು ರಾಜ್ಯ ವಿರೋಧಿ ಭಾಷಣದ ಮೂಲಕ ಜನರು ಮತ್ತು ಸೇನೆಯ ನಡುವೆ ವಿಭಜನೆಯನ್ನು ಸೃಷ್ಟಿಸಿದ ಆರೋಪವನ್ನು ಅಲೀಮಾ ವಿರುದ್ಧ ಹೊರಿಸಲಾಗಿದೆ ಮತ್ತು ಇಸ್ಲಾಮಾಬಾದ್ ಎಫ್ಐಎ ಪ್ರಧಾನ ಕಚೇರಿಯಲ್ಲಿ ಹಾಜರಾಗಬೇಕು ಎಂದು ನೋಟಿಸ್ ನಲ್ಲಿ ತಿಳಿಸಲಾಗಿದೆ ಎಂದು ವರದಿಗಳು ತಿಳಿಸಿದೆ. ಸಮಾಜದಲ್ಲಿ ಭಯ ಮತ್ತು ಭೀತಿಯನ್ನು ಹರಡಿದ ಆರೋಪದ ಮೇಲೆ ಎಫ್ಐಎ (ಸೈಬರ್ ಅಪರಾಧ ವಿಭಾಗ) ಹೊರಡಿಸಿದ ಸಮನ್ಸ್ ಅನ್ನು ಇಮ್ರಾನ್ ಸಹೋದರಿ ತಪ್ಪಿಸಿಕೊಂಡಿದ್ದಾರೆ.