ಬೆಂಗಳೂರು: ವಂಚಕರು, ಕಳ್ಳರು, ಮೋಸಗಾರರಿಗೆ ದೇವರ ಬಗ್ಗೆಯೂ ಕಿಂಚಿತ್ತು ಭಯ-ಭೀತಿ ಎಂಬುದಿಲ್ಲ. ದೇವರ ಹೆಸರನ್ನು ಹೇಳಿಕೊಂಡು ರಾಜಾರೋಷವಾಗಿ ವಂಚನೆಯಲ್ಲಿ ತೊಡಗಿಕೊಳ್ತಾರೆ. ಇತ್ತೀಚೆಗೆ ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸುವುದಾಗಿ ಹೇಳಿ ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್.ಧೋನಿ ಮ್ಯಾನೇಜರ್ ಗೆ 6.5 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯದ ಶಾಸಕರೊಬ್ಬರಿಗೆ ಇದೇ ರೀತಿಯ ವಂಚನೆಯಾಗಿರುವ ವಿಷಯ ಬಹಿರಂಗವಾಗಿದೆ.
ನೆಲಮಂಗಲ ಶಾಸಕ ಶ್ರೀನಿವಾಸ್ ಗೆ ತಿರುಪತಿಯಲ್ಲಿ ವಿಶೇಷ ದರ್ಶನ ಮಾಡಿಸುತ್ತೇನೆ ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಆಪ್ತ ಸಹಾಯಕ ಮಾರುತಿ ಎಂಬಾತ 8 ಲಕ್ಷ ರೂಪಾಯಿ ವಂಚಿಸಿರುವ ಆರೋಪ ಕೇಳಿಬಂದಿದೆ.
ಕರ್ನಟಕ ರಾಜ್ಯದಿಂದ ಟಿಟಿಡಿಯಲ್ಲಿ ಸದಸ್ಯರಾಗಿರುವ ಎಸ್.ಆರ್.ವಿಶ್ವನಾಥ್, ತಿರುಪತಿ ತಿಮ್ಮಪ್ಪನ ದರ್ಶನಕ್ಕಾಗಿ ಹೋಗುವವರಿಗೆ ಪಾಸ್ ಕೊಡುವ ನಿಟ್ಟಿನಲ್ಲಿ ಸಹಾಯಕನನ್ನಾಗಿ ಮಾರುತಿ ಎಂಬಾತನನ್ನು ಸೇರಿಸಿಕೊಂಡಿದ್ದರು. ಮಾರುತಿ ಎಂಬಾತ ಶಾಸಕ ಶ್ರೀನಿವಾಸ್ ಹಾಗೂ ಆಪ್ತ ಮುಖಂಡರಿಗೆ ವಿಶೇಷ ದರ್ಶನ ಮಾಡಿಸುತ್ತೇನೆ. ಜೊತೆಗೆ ರೂಮ್ ವ್ಯವಸ್ಥೆ ಕೂಡ ಇರಲಿದೆ ಎಂದು ಹೇಳಿ ಆನ್ ಲೈನ್ ನಲ್ಲಿ ಹಣ ಪಡೆದಿದ್ದಾನೆ. ಹೀಗೆ ಹಣ ಪಡೆದ ವ್ಯಕ್ತಿ ವಿಶೇಷ ದರ್ಶನಕ್ಕೆ ಪಾಸ್ ನ್ನು ಕೊಟ್ಟಿಲ್ಲ, ದರ್ಶನವನ್ನೂ ಮಾಡಿಸಿಲ್ಲ. ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.
ನೆಲಮಂಗಲ ಟೌನ್ ಠಾಣೆಯಲ್ಲಿ ಮಾರುತಿ ವಿರುದ್ಧ ದೂರು ದಾಖಲಾಗಿದೆ. ಮಾರುತಿ ವಿರುದ್ಧ ಕೇಸ್ ದಾಖಲಾಗುತ್ತಿದ್ದಂತೆ ಆತನನ್ನು ಶಾಸಕ ಎಸ್.ಆರ್.ವಿಶ್ವನಾಥ್ ಕೆಲಸದಿಂದ ತೆಗೆದುಹಾಕಿದ್ದಾರೆ.
ಆರೋಪಿ ಮಾರುತಿ ವಿರುದ್ಧ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ನೆಲಮಂಗಲ ಠಾಣೆಗಳಲ್ಲಿ ದೂರು ದಾಖಲಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.