ಚಳಿಗಾಲದಲ್ಲಿ ಹೆಚ್ಚು ಬೆಚ್ಚಗಿನ ಆಹಾರ ಸೇವನೆ ಮಾಡುವ ಮನಸ್ಸಾಗುತ್ತೆ. ಬೆಳಿಗ್ಗೆಯಿಂದ ರಾತ್ರಿಯವರೆಗೆ ಜನರು ನಾಲ್ಕೈದು ಬಾರಿ ಟೀ ಅಥವಾ ಕಾಫಿ ಸೇವನೆ ಮಾಡಿರುತ್ತಾರೆ. ದಿನದಲ್ಲಿ ಒಂದು ಬಾರಿ ಟೀ ಕುಡಿಯೋದ್ರಿಂದ ಹಾನಿ ಏನಿಲ್ಲ. ಆದ್ರೆ ದಿನಕ್ಕೆ ನಾಲ್ಕೈದು ಬಾರಿ ಚಹಾ ಸೇವನೆ ಹಾಗೂ ಬಿಸಿ ಬಿಸಿ ಟೀ ಕುಡಿಯುವುದು ಆರೋಗ್ಯಕ್ಕೆ ಅಪಾಯಕಾರಿ.
ತಜ್ಞರ ಪ್ರಕಾರ, ಚಳಿಗಾಲದಲ್ಲಿ ಕೆಲ ಟೀ ಕುಡಿಯುವಾಗ ಎಚ್ಚರಿಕೆ ವಹಿಸಬೇಕು. ಶುಂಠಿ ಟೀ ಕುಡಿಯುವ ಅಭ್ಯಾಸ ನಿಮಗಿದ್ದರೆ ನೀವು ಚಳಿಗಾಲದಲ್ಲಿ ಅದನ್ನು ಹೆಚ್ಚು ಕುದಿಸಬಾರದು ಎನ್ನುತ್ತಾರೆ ತಜ್ಞರು. ನೀವು ಶುಂಠಿ, ಲವಂಗ, ಏಲಕ್ಕಿ ಹಾಕಿದ ಟೀಯನ್ನು ಹೆಚ್ಚು ಕುದಿಸಿದಾಗ ಅದ್ರಲ್ಲಿರುವ ಟ್ಯಾನಿನ್ ಹೊರಗೆ ಬರುತ್ತದೆ. ಇದು ಆಸಿಡಿಟಿ ಸಮಸ್ಯೆಗೆ ಕಾರಣವಾಗುತ್ತದೆ.
ಟ್ಯಾನಿನ್ ಎನ್ನುವುದು ಟೀ ಎಲೆಯಲ್ಲಿ ಕಾಣಿಸುವ ಒಂದು ರೀತಿಯ ಉತ್ಕರ್ಷಣ ನಿರೋಧಕವಾಗಿದೆ. ನೀವು ಹೆಚ್ಚಿನ ಪ್ರಮಾಣದಲ್ಲಿ ಟ್ಯಾನಿನ್ ಸೇವನೆ ಮಾಡಿದಾಗ ಅದು ಆಸಿಡಿಟಿಗೆ ಕಾರಣವಾಗುತ್ತದೆ. ಇದು ಹೊಟ್ಟೆ ಊತಕ್ಕೂ ಕಾರಣವಾಗುತ್ತದೆ. ಕರುಳಿನ ಸಮಸ್ಯೆ ಇರುವವರು ಟೀಯನ್ನು ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಹೊಟ್ಟೆ ಸೋಂಕು, ಗ್ಯಾಸ್ಟ್ರಿಕ್ ಇರುವವರು ಸಂಪೂರ್ಣವಾಗಿ ಟೀ ಬಿಡುವುದು ಒಳ್ಳೆಯದು.
ಟೀ ಚಟವಾಗಿದ್ದು, ಬಿಡಲು ಸಾಧ್ಯವೇ ಇಲ್ಲ ಎನ್ನುವವರು ಅದರ ಪ್ರಮಾಣ ಕಡಿಮೆ ಮಾಡ್ತಾ ಬನ್ನಿ. ದಿನಕ್ಕೆ ಒಂದು ಇಲ್ಲವೆ ಎರಡು ಬಾರಿ ಮಾತ್ರ ಅದೂ ಸ್ವಲ್ಪ ಟೀ ಸೇವನೆ ಮಾಡುವುದನ್ನು ರೂಢಿಸಿಕೊಳ್ಳಿ.