ಅನೇಕ ಬಾರಿ ನಾವು ರಾತ್ರಿ ತಲೆಸ್ನಾನ ಮಾಡಿಬಿಡುತ್ತೇವೆ. ಆದರೆ ರಾತ್ರಿ ಕೂದಲು ತೊಳೆಯುವುದು ಎಷ್ಟು ಸೂಕ್ತ ಅನ್ನೋದು ಅನೇಕರಲ್ಲಿರುವ ಗೊಂದಲ. ಈ ಬಗ್ಗೆ ಹಲವು ರೀತಿಯ ತಪ್ಪು ಕಲ್ಪನೆಗಳು ಮತ್ತು ಅನುಮಾನಗಳು ಇವೆ. ರಾತ್ರಿ ತಲೆಸ್ನಾನ ಮಾಡುವುದು ಸೂಕ್ತವಲ್ಲ ಎಂದು ಅನೇಕರು ನಂಬುತ್ತಾರೆ. ಇನ್ನು ಕೆಲವರು ಅದರಿಂದೇನೂ ಸಮಸ್ಯೆಯಾಗುವುದಿಲ್ಲ ಎಂದುಕೊಂಡಿದ್ದಾರೆ.
ರಾತ್ರಿ ಕೂದಲು ತೊಳೆಯುವ ಅಭ್ಯಾಸ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ ಎನ್ನುತ್ತಾರೆ ತಜ್ಞರು. ತಲೆಸ್ನಾನ ಮಾಡಿದಾಗ ಕೂದಲು ಒದ್ದೆಯಾಗುತ್ತದೆ. ಒದ್ದೆಯಾದ ಕೂದಲು ತುಂಬಾ ಭಾರವಾಗಿರುತ್ತದೆ. ಒದ್ದೆ ಕೂದಲನ್ನು ನಾವು ದಿಂಬು ಅಥವಾ ಹಾಸಿಗೆಯ ಮೇಲೆ ಇರಿಸಿಕೊಂಡು ಮಲಗಿಬಿಡುತ್ತೇವೆ. ಆಗ ಒತ್ತಡ ಇನ್ನಷ್ಟು ಹೆಚ್ಚಾಗುತ್ತದೆ. ಈ ಒತ್ತಡವು ಕೂದಲಿನ ಬೇರುಗಳನ್ನು ದುರ್ಬಲಗೊಳಿಸುತ್ತದೆ ಮತ್ತು ಕೂದಲು ಒಡೆಯಲು ಪ್ರಾರಂಭಿಸುತ್ತದೆ.
ಒದ್ದೆಯಾದ ಕೂದಲು ಬಹುಬೇಗ ಶಿಲೀಂಧ್ರಗಳ ಸೋಂಕಿಗೆ ಒಳಗಾಗುತ್ತದೆ. ದೀರ್ಘಕಾಲದವರೆಗೆ ಕೂದಲಿನಲ್ಲಿ ತೇವಾಂಶವಿದ್ದರೆ ಸೂಕ್ಷ್ಮಜೀವಿಗಳು ಮತ್ತು ಶಿಲೀಂಧ್ರಗಳು ನಮ್ಮನ್ನು ಸೋಂಕಿಗೆ ಗುರಿಯಾಗಿಸಬಹುದು. ರಾತ್ರಿಯಿಡೀ ಒದ್ದೆಯಾದ ಕೂದಲಿನೊಂದಿಗೆ ಸಂಪರ್ಕದಲ್ಲಿರುವುದು ಮೊಡವೆ ಮತ್ತು ಇತರ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು.
ಒದ್ದೆ ಕೂದಲಿನೊಂದಿಗೆ ಮಲಗುವುದು ಕೂದಲಿನ ನೈಸರ್ಗಿಕ ರಚನೆ ಮತ್ತು ಹೊಳಪಿನ ಮೇಲೆ ಕೂಡ ಪರಿಣಾಮ ಬೀರುತ್ತದೆ. ರಾತ್ರಿ ತಲೆಸ್ನಾನ ಮಾಡಿ ಮಲಗಿದರೆ ಹಲವಾರು ಗಂಟೆಗಳ ಕಾಲ ಕೂದಲು ತೇವವಾಗಿರುತ್ತದೆ. ಹೀಗೆ ಪದೇ ಪದೇ ಮಾಡುವುದರಿಂದ ಕೂದಲಿಗೆ ಹಾನಿಯಾಗುತ್ತದೆ.