ಬೆಂಗಳೂರು : ಬಿಜೆಪಿ ಶಾಸಕ ಯತ್ನಾಳ್ ಗೆ ಬಿಗ್ ರಿಲೀಫ್ ಸಿಕ್ಕಿದ್ದು, ಸಕ್ಕರೆ ಕಾರ್ಖಾನೆ ಮುಚ್ಚುವ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿದೆ.
ಈ ಬಗ್ಗೆ ಬಿಜೆಪಿ ಶಾಸಕ ಯತ್ನಾಳ್ ಟ್ವೀಟ್ ಮಾಡಿದ್ದಾರೆ’ ಕಾಂಗ್ರೆಸ್ ಸರ್ಕಾರ ನಮ್ಮ ಸಿದ್ದಸಿರಿ ಸಕ್ಕರೆ ಹಾಗು ಎಥನಾಲ್ ಕಾರ್ಖಾನೆ ಮುಚ್ಚಲು ನೀಡಿದ್ದ ನೋಟಿಸ್ ಹಾಗು ಮುಚ್ಚುವ ಷಡ್ಯಂತ್ರಕ್ಕೆ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯ ತಡೆ ನೀಡಿದೆ’ ಎಂದು ಟ್ವೀಟ್ ಮಾಡಿದ್ದಾರೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಒಡೆತನದ ಸಕ್ಕರೆ ಕಾರ್ಖಾನೆ ಮುಚ್ಚಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಮ್ಮಾಯಿದಲಾಯಿ ಗ್ರಾಮದ ಸಿದ್ಧ ಶ್ರೀ ಸಕ್ಕರೆ ಕಾರ್ಖಾನೆಯ ಕಲುಷಿತ ನೀರು ಮುಲ್ಲಾಮಾರಿ ಜಲಾಶಯಕ್ಕೆ ಬಿಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ವಾಯು, ಜಲ ಕಾಯ್ದೆ ಉಲ್ಲಂಘನೆ ಆರೋಪ ಹಿನ್ನೆಲೆಯಲ್ಲಿ ಫ್ಯಾಕ್ಟರಿಗೆ ಬೀಗ ಜಡಿಯುವಂತೆ ಹಾಗೂ ಫ್ಯಾಕ್ಟರಿಗೆ ಲಭ್ಯವಿರುವ ನೀರಿನ ಸಂಪರ್ಕ, ವಿದ್ಯುತ್ ಕಡಿತಗೊಳಿಸುವಂತೆ ಮಂಡಳಿ ಆದೇಶ ನೀಡಿತ್ತು. ಇದೀಗ ಮಂಡಳಿ ಆದೇಶಕ್ಕೆ ಕೋರ್ಟ್ ತಡೆ ನೀಡಿದೆ.
ಹುಮ್ನಾಬಾದ್ ನ ಪ್ರಸನ್ನ ಪ್ರಿ ಪ್ರೊಸೆಸಿಂಗ್ ಪ್ರೈವೆಟ್ ಲಿಮಿಟೆಡ್ ನಲ್ಲಿ ಇತ್ತೀಚೆಗೆ ವಿಷಾನೀಲ ಸೋರಿಕೆಯಾಗಿ ಇಬ್ಬರು ಕಾರ್ಮಿಕರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಹುಮ್ನಾಬಾದ್ ಕಾರ್ಖಾನೆಯನ್ನು ಹಾಗೂ ಯತ್ನಾಳ್ ಒಡೆತನದ ಚಿಂಚೋಳಿಯ ಸಿದ್ದಶ್ರೀ ಸೌಹಾರ್ದ ಸಹಕಾರಿ ಸಕ್ಕರೆ ಕಾರ್ಖಾನೆಗಳನ್ನು ತಕ್ಷಣ ಮುಚ್ಚುವಂತೆ ಆದೇಶ ನೀಡಲಾಗಿತ್ತು.