ಬೆಂಗಳೂರು: ಬೆಂಗಳೂರಿನ ಕೆ.ಆರ್.ಪುರಂ ನ ಚಿನ್ನದ ಅಂಗಡಿ ಮೇಲೆ ದಾಳಿ ನಡೆಸಿದ್ದ ನಕಲಿ ಅಧಿಕಾರಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಜನವರಿ 27ರಂದು ಕೆ.ಆರ್.ಪುರಂನಲ್ಲಿರುವ ಮಹಾಲಕ್ಷ್ಮೀ ಜ್ಯುವೆಲ್ಲರ್ ಚಿನ್ನದ ಅಂಗಡಿ ಮೇಲೆ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ ಅಧಿಕಾರಿಗಳು ಎಂದು ಹೇಳಿಕೊಂಡು ನಾಲ್ವರು ದಾಳಿ ಮಾಡಿದ್ದರು. ಆದರೆ ದಾಳಿ ಮಾಡಿದವರು ಅಸಲಿ ಅಧಿಕಾರಿಗಳು ಅಲ್ಲ, ನಕಲಿ ಅಧಿಕಾರಿಗಳು ಎಂಬುದು ಗೊತ್ತಾಗಿದೆ.
ಹಾಲ್ ಮಾರ್ಕ್ ಇಲ್ಲದೇ ಅಕ್ರಮವಾಗಿ ಚಿನ್ನ ಮರಾಟ ಮಾಡುತ್ತಿದ್ದೀರಿ ಎಂಬ ಆರೋಪವಿದೆ. ಹಾಗಾಗಿ ದಾಳಿ ನಡೆಸಲಾಗಿದೆ ಎಂದಿದ್ದರು. 45 ನಿಮಿಷ ಪರಿಶೀಲಿಸಿದ ನಕಲಿ ಅಧಿಕಾರಿಗಳು 80 ಲಕ್ಷ ಮೌಲ್ಯದ 1 ಕೆಜಿಗೂ ಅಧಿಕ ಚಿನ್ನ ತೆಗೆದುಕೊಂಡು ಹೋಗಿದ್ದರು. ಬಳಿಕ ಅಂಗಡಿ ಮಾಲೀಕನಿಗೆ ನಕಲಿ ನೋಟಿಸ್ ನೀಡಿ ಮುಂದಿನ ವಾರ ತಮಿಳುನಾಡಿಗೆ ಬರುವಂತೆ ಹೇಳಿ ಹೋಗಿದ್ದಾರೆ. ಅಲ್ಲದೇ ಸಿಸಿಟಿವಿ ಡಿವಿ ಆರ್ ತೆಗೆದುಕೊಂಡು ಹೋಗಿದ್ದಾರೆ.
ಇದನ್ನು ಕಂಡು ಅನುಮಾನಗೊಂಡ ಚಿನ್ನದ ಅಂಗಡಿ ಸಿಬ್ಬಂದಿಗಳು ಬೈಕ್ ನಲ್ಲಿ ಅಧಿಕಾರಿಗಳನ್ನು ಹಿಂಬಾಲಿಸುತ್ತಿದ್ದಂತೆ ಟಿಸಿ ಪಾಳ್ಯ ಬಳಿ ವಾಹನವನ್ನು ಬೈಕ್ ಗಳಿಗೆ ಗುದ್ದಿದ್ದಾರೆ. ಅಂಗಡಿ ಮಾಲೀಕ ಇತ್ತ ಕೆ.ಆರ್.ಪುರಂ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.
ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ನಾಲ್ವರು ನಕಲಿ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಸಂಪತ್ ಕುಮಾರ್, ಜೋಶಿ ಥಾಮಸ್, ಅವಿನಾಶ್ ಹಾಗೂ ಸಂದೀಪ್ ಬಂಧಿತ ಆರೋಪಿಗಳು. ಸಂಪತ್ ಕುಮಾರ್ ಈಗಾಗಲೇ ಮಂಡ್ಯದಲ್ಲಿ ಕಳ್ಳತನ ಆರೋಪದಲ್ಲಿ ಬಂಧಿತನಾಗಿ ಬಿಡುಗಡೆಯಾಗಿದ್ದ. ಜೈಲಿನಿಂದ ಹೊರ ಬರುತ್ತಿದ್ದಂತೆ ಮತ್ತೆ ಹಳೆ ಚಾಳಿ ಮುಂದುವರೆಸಿದ್ದಾನೆ.