
ಮಡಿಕೇರಿ: ಸಿಎಂ ಸಿದ್ದರಾಮಯ್ಯ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ವಾಗ್ದಾಳಿ ನಡೆಸಿರುವ ಸಂಸದ ಪ್ರತಾಪ್ ಸಿಂಹ, ಸೈರನ್ ವಾಹನದಲ್ಲಿ ಪೈಲಟ್ ವಾಹನ ಇಟ್ಟುಕೊಂಡು ಓಡಾಡ್ತಾರೆ. ಇದರಿಂದ ಕೊಡಗು ಜಿಲ್ಲೆಗೆ ಏನೂ ಪ್ರಯೋಜನವಾಗುವುದಿಲ್ಲ ಎಂದು ಕಿಡಿಕಾರಿದ್ದಾರೆ.
ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಕಾವೇರಿ ನದಿ ನೀರು ವಿವಾದದಲ್ಲಿ 4 ಬಾರಿ ನಮ್ಮ ವಿರುದ್ಧವೇ ತೀರ್ಪು ಬಂದಿದೆ. ನೀವು ದೊಡ್ಡ ಲಾಯರ್ ಅಲ್ವಾ? ಯಾಕೆ ಹೀಗಾಯ್ತು? ಎಂದು ಪ್ರಶ್ನಿಸಿದ್ದಾರೆ.
ಕಳೆದ 7 ತಿಂಗಳಲ್ಲಿ ಸಿಎಂ ಸಿದ್ದರಾಮಯ್ಯ ಏನು ಕಡೆದು ಕಟ್ಟೆಹಾಕಿಲ್ಲ. ಸರ್ಕಾರದಿಂದ 7 ತಿಂಗಳಲ್ಲಿ 7 ರೂಪಾಯಿನೂ ಕೊಡಗಿಗೆ ತಂದಿಲ್ಲ. ಮೊನ್ನೆಯಷ್ಟೇ ಅಭಿವೃದ್ಧಿ ಯೋಜನೆಗಳಿಗೆ ಸಿಎಂ ಚಾಲನೆ ನೀಡಿದ್ದಾರೆ. ಅವೆಲ್ಲವೂ ಕೇಂದ್ರ ಸರ್ಕಾರದ ಯೋಜನೆಗಳು. ಮಂಥರ್ ಗೌಡರನ್ನು ನೋಡಿ ಶಾಸಕ ಪೊನ್ನಣ್ಣ ಕಲಿಬೇಕು. ತಾವು ಮಾಡದ ಕೆಲಸಕ್ಕೆ ಮಂಥರ್ ಗೌಡ ಕ್ರೆಡಿಟ್ ತೆಗೆದುಕೊಳ್ಳಲ್ಲ. 146 ಕೋಟಿ ಯೋಜನೆಗೆ ಕಳೆದ ಫೆಬ್ರವರಿಯಲ್ಲಿ ಹಣ ಬಿಡುಗಡೆಯಾಗಿದೆ. ಇದು ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ ತಂದಿರುವ ಯೋಜನೆ. ಸಿಎಂ ಸಿದ್ದರಾಮಯ್ಯ ಯಾವ ಯೋಜನೆಯನ್ನೂ ಜಾರಿ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.