ಚಿತ್ರದುರ್ಗ: ಕರ್ನಾಟಕ ಶೋಷಿತ ಸಮುದಾಯಗಳ ಒಕ್ಕೂಟ ಮತ್ತು ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ಇಂದು ಚಿತ್ರದುರ್ಗದಲ್ಲಿ ರಾಜ್ಯಮಟ್ಟದ ಶೋಷಿತರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಸಮಾವೇಶದಲ್ಲಿ 5 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಹಲವು ನಾಯಕರು ಭಾಗವಹಿಸಲಿದ್ದಾರೆ. ಕಾಂತರಾಜ್ ವರದಿ ಜಾರಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಹಕ್ಕೊತ್ತಾಯ ಮಂಡನೆಗೆ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಶೋಷಿತ ಸಮುದಾಯಗಳ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಐತಿಹಾಸಿಕ ಸಮಾವೇಶ ಆಯೋಜಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ಸಂಚಾಲಕ ಕೆ.ಎಂ. ರಾಮಚಂದ್ರಪ್ಪ ತಿಳಿಸಿದ್ದಾರೆ.
ಒಕ್ಕೂಟದಲ್ಲಿ ವಿವಿಧ ಜಾತಿ ಸಂಘಟನೆಗಳಿವೆ. ಬೇಡಿಕೆ ಈಡೇರಿಸಲು ಆಯಾ ಜಾತಿ ಸಂಘಟನೆಗಳು ಪ್ರತ್ಯೇಕ ಹೋರಾಟ ನಡೆಸಿದರೆ ಸರ್ಕಾರಗಳು ಈಡೇರಿಸುವುದು ಕಷ್ಟ. ಹೀಗಾಗಿ ಮಹಾ ಒಕ್ಕೂಟ ಸಂಘಟನೆ ಬಲಪಡಿಸಿ ಹೋರಾಟ ನಡೆಸಿದರೆ ಸರ್ಕಾರಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗುತ್ತದೆ. ಸಮಾವೇಶಕ್ಕೆ ರಾಜಕೀಯ ಅಜೆಂಡಾ ಇಲ್ಲ ಎಂದು ಹೇಳಿದ್ದಾರೆ.
150 ಎಕರೆ ವಿಸ್ತಿರ್ಣದಲ್ಲಿ ಸಮಾವೇಶ ಆಯೋಜಿಸಿದ್ದು, ಬಳ್ಳಾರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ, ಗದಗ, ಹಾವೇರಿ ಜಿಲ್ಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರಲಿದ್ದಾರೆ. ಉಳಿದ ಜಿಲ್ಲೆಗಳಿಂದ ತಲಾ ಹತ್ತು ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. 3 ಲಕ್ಷಕ್ಕೂ ಅಧಿಕ ಕುರ್ಚಿಗಳನ್ನು ಹಾಕಲಾಗಿದೆ.