ನವದೆಹಲಿ: ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಏಳು ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶನಿವಾರ ಆರೋಪಿಸಿದ್ದಾರೆ.
ಮದ್ಯ ನೀತಿ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಬೆದರಿಕೆ ಹಾಕಿದ ಬಿಜೆಪಿ ಎಎಪಿ ಶಾಸಕರೊಂದಿಗೆ ಮಾತುಕತೆ ನಡೆಸಿದೆ ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕನ ಸಂಭಾಷಣೆಯನ್ನು ಟೇಪ್ ರೆಕಾರ್ಡ್ ಮಾಡಲಾಗಿದೆ ಎಂದು ಎಎಪಿ ಹೇಳಿಕೊಂಡಿದೆ. ಇತ್ತೀಚೆಗೆ ಅವರು ದೆಹಲಿಯ ನಮ್ಮ ಏಳು ಶಾಸಕರನ್ನು ಸಂಪರ್ಕಿಸಿ, ‘ನಾವು ಕೆಲವು ದಿನಗಳ ನಂತರ ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ಅದರ ನಂತರ ನಾವು ಶಾಸಕರನ್ನು ಒಡೆಯುತ್ತೇವೆ. 21 ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಅದರ ನಂತರ ನಾವು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸುತ್ತೇವೆ. ನೀವೂ ಬರಬಹುದು. 25 ಕೋಟಿ ಕೊಟ್ಟು ಬಿಜೆಪಿ ಟಿಕೆಟ್ ಪಡೆದು ಚುನಾವಣೆಗೆ ಸ್ಪರ್ಧಿಸಬಹುದು ಎಂದು ಆಮಿಷ ಒಡ್ಡಲಾಗಿದೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ.
ನಾವು 21 ಶಾಸಕರನ್ನು ಸಂಪರ್ಕಿಸಿದ್ದೇವೆ ಎಂದು ಬಿಜೆಪಿ ಹೇಳಿಕೊಂಡರೂ, ನಮ್ಮ ಮಾಹಿತಿಯ ಪ್ರಕಾರ, ಇಲ್ಲಿಯವರೆಗೆ ಕೇವಲ 7 ಶಾಸಕರನ್ನು ಮಾತ್ರ ಸಂಪರ್ಕಿಸಲಾಗಿದೆ ಮತ್ತು ಅವರೆಲ್ಲರೂ ನಿರಾಕರಿಸಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.
ಚುನಾವಣೆಯಲ್ಲಿ ಎಎಪಿಯನ್ನು ಸೋಲಿಸಲು ಬಿಜೆಪಿ ಶಕ್ತಿಹೀನವಾಗಿರುವುದರಿಂದ ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕೇಜ್ರಿವಾಲ್ ಆರೋಪಿಸಿದರು.