ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ತೊರೆದು ಬಿಜೆಪಿಗೆ ಮರು ಸೇರ್ಪಡೆಯಾಗಿರುವ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಶಟ್ಟರ್ ವಿರುದ್ಧ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಗೆ ನೂರಾರು ಜನರು ಬರ್ತಾರೆ, ನೂರಾರು ಜನರು ಹೋಗ್ತಾರೆ. ಒಂದು ರೀತಿಯಲ್ಲಿ ಶೆಟ್ಟರ್ ಪಕ್ಷ ಬಿಟ್ಟು ಹೋಗಿದ್ದೇ ಒಳ್ಳೆಯದಾಯ್ತು ಎಂದು ಹೇಳಿದ್ದಾರೆ.
ನಾವು ನೀತಿ, ಸಿದ್ಧಾಂತಗಳ ಮೇಲೆ ರಾಜಕೀಯ ಮಾಡುವವರು. ಅಲ್ಪಸಂಖ್ಯಾತ ಸಮುದಾಯವನ್ನು ಶೆಟ್ಟರ್ ಒಪ್ಪುತ್ತಿರಲಿಲ್ಲ. ಇದರಿಂದ ನಮ್ಮ ಪಕ್ಷ ಸಂಘಟನೆಗೂ ಕಷ್ಟವಾಗುತ್ತಿತ್ತು. ಶೆಟ್ಟರ್ ಹೋಗಿದ್ದೇ ಒಳ್ಳೆಯದಾಯ್ತು ಎಂದು ಕಾರ್ಯಕರ್ತರು ಕೂಡ ಹೇಳುತ್ತಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆ ವೇಳೆ ಜಗದೀಶ್ ಶೆಟ್ಟರ್ ನಮ್ಮ ಪಕ್ಷ ಸೇರಿದರು. ಚುನಾವಣೆಗೂ ಮುನ್ನ ಅಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸವಿತ್ತು. ಬಿಜೆಪಿ ವಿರುದ್ಧ ದೊಡ್ಡ ದೊಡ್ಡ ಆರೋಪ ಮಾಡಿ ಪಕ್ಷ ಸೇರಿದರು. ನಮ್ಮ ಕಾರ್ಯಕರ್ತರ ಟಿಕೆಟ್ ಅವರಿಗಾಗಿ ತ್ಯಾಗ ಮಾಡಬೇಕಾಯಿತು. ಮಾಜಿ ಸಿಎಂ ಎಂಬ ಗೌರವದಿಂದ ಟಿಕೆಟ್ ಕೊಟ್ಟೆವು. ಆದರೆ ಚುನಾವಣೆಯಲ್ಲಿ ಸೋತರು. ಆದರೂ ಅವರ ಮೇಲಿನ ನಂಬಿಕೆಯಿಂದ ಎಂಎಲ್ ಸಿ ಮಾಡಿದೆವು. ಈಗ ಏಕಾಏಕಿ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ವಿರುದ್ಧ ಅವರು ಮಾಡಿರುವ ಆರೋಪಗಳ ಬಗ್ಗೆ ಅವರೇ ಉತ್ತರ ಕೊಡಬೇಕು. ಬಿಜೆಪಿ ದೂರವಿಡಬೇಕು ಎಂದು ಜೆಡಿಎಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಆಪರೇಷನ್ ಕಮಲ ಮಾಡಿ ಯಾರು ಸರ್ಕಾರವನ್ನು ತೆಗೆದೆರೋ ಅವರ ಜೊತೆಗೆ ಈಗ ಜೆಡಿಎಸ್ ಸೇರಿಕೊಂಡಿಲ್ವಾ? ಹೆಚ್.ಡಿ.ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರರಾಗಿಲ್ವಾ? ಹಾಗೇ ರಾಜಕೀಯದಲ್ಲಿ ಏನು ಬೇಕಾದರೂ ಆಗುತ್ತೆ ಎಂದು ಹೇಳಿದರು.