ಶಿವಮೊಗ್ಗ : ಉಳುವವನೆ ಹೊಲದ ಒಡೆಯ ಹೋರಾಟದ ನೆನಪಿಗಾಗಿ ‘ಕಾಗೋಡು ಸ್ಮಾರಕ’ ನಿರ್ಮಾಣ ಮಾಡಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.
ಜಿಲ್ಲಾ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಂದು ಡಿಎಆರ್ ಪೊಲೀಸ್ ಪೆರೇಡ್ ಮೈದಾನದಲ್ಲಿ ಏರ್ಪಡಿಸಲಾಗಿದ್ದ 75 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಉಳುವವನೆ ಹೊಲದ ಒಡೆಯ ಹೋರಾಟದ ನೆನಪಿಗಾಗಿ ಕಾಗೋಡು ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು.ಜಿಲ್ಲೆಯು ಸಮಾಜವಾದದ ತವರೂರಾಗಿದ್ದು ಸಮಾಜವಾದಿ ಹೋರಾಟಗಾರರಾದ ಗೋಪಾಲಗೌಡರ ಸ್ಮರಣಾರ್ಥ ಸ್ಮಾರಕ ಮತ್ತು ಉಳುವವನೆ ಹೊಲದ ಒಡೆಯ ಹೋರಾಟದ ನೆನಪಿಗಾಗಿ ಕಾಗೋಡು ಸ್ಮಾರಕ ನಿರ್ಮಾಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ವಿಶೇಷ ವಂದನೆ : ಜಿಲ್ಲಾ ಪೊಲೀಸ್ ವತಿಯಿಂದ ರಾಗಿಗುಡ್ಡದಲ್ಲಿ ಸೌಹಾರ್ದ ಕ್ರೀಡಾಕೂಟ ನಡೆಸುವ ಮೂಲಕ ಕುವೆಂಪುರವರ ಸರ್ವಜನಾಂಗದ ಶಾಂತಿಯ ತೋಟಕ್ಕೆ ಉತ್ತಮ ಉದಾಹರಣೆಯಾಗಿರುವುದಕ್ಕೆ ನಾನು ವಿಶೇಷ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು, ಪೊಲೀಸ್ ಸಶಸ್ತ್ರ ದಳಗಳು, ಎನ್ಸಿಸಿ, ಸ್ಕೌಟ್ಸ್ ಮತ್ತು ಗೈಡ್ಸ್ ಪಡೆಗಳು ಶಿಸ್ತಿನ ಪಥಸಂಚಲನ ನಡೆಸಿದರು.
ಇದೇ ವೇಳೆ ಉತ್ತಮ ಆರೋಗ್ಯ ಸೇವೆ ಸಲ್ಲಿಸಿದ ಸರ್ಕಾರಿ, ಖಾಸಗಿ ವೈದ್ಯರು ಹಾಗೂ ಕ್ರೀಡೆಯಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು. ಹಾಗೂ ರಾಷ್ಟ್ರಪತಿ ಪ್ರಶಸ್ತಿ ಪಡೆದ ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿಯವರನ್ನು ಅಭಿನಂದಿಸಲಾಯಿತು.ಪಥಸಂಚಲನದಲ್ಲಿ ಎನ್ಸಿಸಿ ಜ್ಯೂನಿಯರ್ ಬಾಲಕಿಯರ ವಿಭಾಗ ಪ್ರಥಮ, ಸರ್ಕಾರಿ ಬಾಲಕರ ಬಾಲಮಂದಿರದ ಬಾಲಕರು ದ್ವಿತೀಯ ಹಾಗೂ ಸಾಂದೀಪಿನಿ ಶಾಲೆ ವಿದ್ಯಾರ್ಥಿಗಳಿಗೆ ತೃತೀಯ ಬಹುಮಾನ ಪಡೆದರು.
ಶಾಸಕರಾದ ಎಸ್ ಎನ್ ಚನ್ನಬಸಪ್ಪ, ರುದ್ರೆಗೌಡರು, ಅರುಣ್ ಕುಮಾರ್, ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್, ಜಿ.ಪಂ ಸಿಇಓ ಸ್ನೇಹಲ್ ಸುಧಾಕರ ಲೋಖಂಡೆ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಮಿಥುನ್ ಕುಮಾರ್, ಇತರೆ ಅಧಿಕಾರಿಗಳು, ಸ್ವಾತಂತ್ರ್ಯ ಹೋರಾಟಗಾರರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.