ಮೈಸೂರು : ರಾಜ್ಯ ಸರ್ಕಾರದಿಂದ ಸಂವಿಧಾನ ಮತ್ತು ರಾಷ್ಟ್ರೀಯ ಏಕತೆ ಕುರಿತು ಜನವರಿ 26 ರಿಂದ ಫೆಬ್ರವರಿ 26 ರವರೆಗೆ ಜಾಗೃತಿ ಜಾಥಾ ಆಯೋಜಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸಂವಿಧಾನ ರಕ್ಷಣೆ ಎಂದರೆ ಅದು ಜನರ ರಕ್ಷಣೆ ಮಾಡಿದಂತೆ. ಆದ್ದರಿಂದ ಸಂವಿಧಾನದ ರಕ್ಷಣೆಗೆ ನಾವೆಲ್ಲರೂ ಮುಂದಾಗಬೇಕು. ದೇಶದ ಸಾಮಾಜಿಕ, ರಾಜಕೀಯ, ಆರ್ಥಿಕ ವಿಕಸನಕ್ಕೆ ಸಂವಿಧಾನವನ್ನು ಬಲಪಡಿಸಬೇಕಾಗಿದೆ ಎಂದರು.
75ನೇ ವರ್ಷದ “ಸಂವಿಧಾನ ಅಮೃತ ಮಹೋತ್ಸವ”ದ ಸಂದರ್ಭದಲ್ಲಿ ರಾಜ್ಯ ಸರ್ಕಾರ ಸಂವಿಧಾನದ ಜಾಗೃತಿ ಬಗೆಗೆ ರಾಜ್ಯಾದ್ಯಂತ ಗ್ರಾಮ ಪಂಚಾಯತಿ, ಹೋಬಳಿ ಕೇಂದ್ರ ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಜಾಥಾಕ್ಕೆ ಚಾಲನೆ ನೀಡುತಿದ್ದು, ಸಂವಿಧಾನ ತಜ್ಞರು, ವಿಚಾರವಾದಿಗಳಿಂದ ಭಾಷಣ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ರಾಜ್ಯದ 6 ಸಾವಿರ ಗ್ರಾ.ಪಂ.ಗಳಲ್ಲಿ ಸಂಚರಿಸುವ ಸಂವಿಧಾನ ಜಾಗೃತಿ ಜಾಥಾ ಸ್ಥಬ್ಧಚಿತ್ರ ವಾಹನಗಳು ಬೆಂಗಳೂರಿನಲ್ಲಿ ಸಮಾವೇಶಗೊಳ್ಳಲಿವೆ. ರಾಷ್ಟ್ರಮಟ್ಟದ ವಿಚಾರ ಸಂಕಿರಣ ಹಾಗೂ ಸಮಾವೇಶವು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿವೆ ಎಂದರು.
ಸಂವಿಧಾನದ ಮೂಲ ಅಂಶಗಳಾದ ಧರ್ಮನಿರಪೇಕ್ಷತೆ, ಜಾತ್ಯತೀತತೆ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಒದಗಿಸುವ ವಿಧಿಗಳು, ಮೂಲಭೂತ ಹಕ್ಕುಗಳು, ಕರ್ತವ್ಯಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳನ್ನು ಖಾತ್ರಿಪಡಿಸುವ ವಿಷಯಗಳ ಬಗೆಗೆ ಸಮ್ಮೇಳನದಲ್ಲಿ ಚರ್ಚೆಗಳು ನಡೆಯಲಿವೆ ಎಂದು ಹೇಳಿದ್ದಾರೆ.
ಸಂವಿಧಾನದ ಅಂಗೀಕಾರದ ಮುನ್ನಾದಿನ ಅಂಬೇಡ್ಕರರು ಮಾಡಿದ ಅಮೋಘ ಭಾಷಣವನ್ನೂ ಪುಸ್ತಕ ಒಳಗೊಂಡಿರುವುದರೊಂದಿಗೆ ಡಾ.ಬಾಬು ರಾಜೇಂದ್ರ ಪ್ರಸಾದ್, ರಾಜಾಜಿ ಅಂತಹವರೂ ಸೇರಿದಂತೆ ಸಂವಿಧಾನ ರಚನಾ ಸಭೆಯ ಮುತ್ಸದ್ದಿಗಳ ಮಾತುಗಳು ಪುಸ್ತಕದಲ್ಲಿರಲಿವೆ. ಪ್ರಮುಖವಾಗಿ ಸಂವಿಧಾನ ಜಾರಿಗೆ ಬಂದ 75 ವರ್ಷಗಳಲ್ಲಿ ಸಂವಿಧಾನದ ಆಶಯ ಹಾಗೂ ಧ್ಯೇಯೋದ್ದೇಶ ಎಷ್ಟರ ಮಟ್ಟಿಗೆ ಈಡೇರಿದೆ ಎಂಬ ಅಂಶವೂ ಪ್ರಮುಖವಾಗಿ ಚರ್ಚೆಯಾಗಲಿದೆ ಎಂದು ಹೇಳಿದ್ದಾರೆ.