ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಿದ್ದು, ಶತ ಶತಮಾನಗಳ ಭಾರತೀಯರ ಕನಸು ನನಸಾಗಿದೆ. ಇಡೀ ದೇಶವೇ ರಾಮಮಯವಾಗಿದೆ. ಹಳ್ಳಿ ಹಳ್ಳಿಯಿಂದ ಹಿಡಿದು, ನಗರದ ಪ್ರತಿ ಗಲ್ಲಿ ಗಲ್ಲಿಯಲ್ಲಿಯೂ ಶ್ರೀರಾಮನದ್ದೇ ಆರಾಧನೆ. ಭೂಮಿಯಿಂದ ಬಾನಿನವರೆಗೂ ರಾಮ ಜಪ, ರಾಮ ಭಜನೆ, ಸಂಕೀರ್ತನೆ….. ಎಲ್ಲಿ ನೋಡಿದರಲ್ಲಿ ರಾಮ ನಾಮವೇ ಕಂಗೊಳಿಸುತ್ತಿದೆ…. ಭಗವಾನ್ ಶ್ರೀರಾಮನ ಭಕ್ತರು ತಮ್ಮದೇ ಆದ ರೀತಿಯಲ್ಲಿ ಭಕ್ತಿಯನ್ನು ಸಮರ್ಪಿಸುತ್ತಿದ್ದಾರೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ರಾಮ ಸಂಕೀರ್ತನೆಯೊಂದಿಗೆ ರಸ್ತೆಯಲ್ಲಿ ತಾಳದೊಂದಿಗೆ ಹೆಜ್ಜೆ ಹಾಕುತ್ತಾ ಸಾಗುತ್ತಿರುವ 2 ವರ್ಷಗಳ ಹಿಂದಿನ ಹಳೇ ವಿಡಿಯೋವೊಂದು ಭಾರಿ ವೈರಲ್ ಆಗಿದೆ.
‘ನಾಮವಿದ್ದರೆ ಸಾಕು ರಾಮ…… ನಿನ್ನ ನಾಮವಿದ್ದರೆ ಸಾಕು……’ ಎಂದು ಗುರುಗಳು ರಾಮನಾಮ ಹಾಡುತ್ತಾ ತಮ್ಮ ಶಿಷ್ಯರೊಂದಿಗೆ ತಾಳ ಹಾಕುತ್ತಾ ರಸ್ತೆಯಲ್ಲಿ ಸಾಗುತ್ತಿದ್ದರೆ. ನಾಟ್ಯ ಕಲಾವಿದೆಯೊಬ್ಬರು ಆ ತಾಳಕ್ಕೆ ತಕ್ಕಂತೆ ಅಭಿನಯಿಸುತ್ತಾ ಹೆಜ್ಜೆ ಇಡುತ್ತ ಮುಂದೆ ಸಾಗುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ. ಈ ಸಾಂಪ್ರದಾಯಿಕ ನಗರ ಸಂಕೀರ್ತನೆಯಲ್ಲಿ ರಾಮನಾಮಕ್ಕೆ ಹೆಜ್ಜೆ ಹಾಕಿದ್ದು ‘ನಮ್ಮನೆ ಯುವರಾಣಿ’ ಸೀರಿಯಲ್ ಖ್ಯಾತಿಯ ಮೀರಾ ಪಾತ್ರಧಾರಿ ಅಂಕಿತಾ ಅಮರ್ ಎಂಬುದು ವಿಶೇಷ.
ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾನೆ ಬಳಿಕ ರಾಮ ನಾಮ ಜಪಿಸದ ಜೀವವಿಲ್ಲ….. ಪ್ರತಿಯೊಬ್ಬರ ಮನದಲ್ಲಿಯೂ ರಾಮ ಭಜನೆ…… ರಾಮ ಸಂಕೀರ್ತನೆ…… ಶ್ರೀರಾಮನದ್ದೇ ಧ್ಯಾನ…… ಸಾಮಾಜಿಕ ಜಾಲತಾಣದಲ್ಲಂತೂ ರಾಮ ನಾಮವೇ ರಾರಾಜಿಸುತ್ತಿದೆ.