ಬೆಂಗಳೂರು : ಕಾಂಗ್ರೆಸ್ ನ ಮತ್ತಷ್ಟು ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಬೊಮ್ಮಾಯಿ ಆವೇಶದಲ್ಲಿ ತೆಗೆದುಕೊಂಡ ನಿರ್ಧಾರ ಬಹಳ ಸಮಯ ಇರಲ್ಲ. ಇದು ಶುರು ಅಷ್ಟೇ, ಇನ್ನೂ ಕಾಂಗ್ರೆಸ್ ನ ಮತ್ತಷ್ಟು ನಾಯಕರು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಬೊಮ್ಮಾಯಿ ಸ್ಪೋಟಕ ಹೇಳಿಕೆ ನೀಡಿದ್ದಾರೆ. ಬಿಜೆಪಿಯಿಂದ ಹೋದ ನಾಯಕರಿಗೆ ಕಾಂಗ್ರೆಸ್ ನಲ್ಲಿ ಹೊಂದಾಣಿಕೆಯಾಗಲ್ಲ, ಎಲ್ಲರೂ ಅಲ್ಲಿ ಅಡ್ಜಸ್ಟ್ ಮಾಡಿಕೊಂಡು ಇರಲ್ಲ ಎಂದರು.
ಜಗದೀಶ್ ಶೆಟ್ಟರ್ ಅವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಂಡಿದ್ದಾರೆ. ಅವರು ಕಾಂಗ್ರೆಸ್ ಮೇಲಿನ ಪ್ರೀತಿಯಿಂದ ಹೋಗಿರಲಿಲ್ಲ. ಬಿಜೆಪಿಯಲ್ಲಿ ಆಗಿರುವ ಬೇಸರದಿಂದ ಕಾಂಗ್ರೆಸ್ ಗೆ ಹೋಗಿದ್ದರು ಎಂದು ಹೇಳಿದರು. ಅವರಿಗೆ ಕಾಂಗ್ರೆಸ್ ಡಿಎನ್ ಎ ಒಗ್ಗುವುದಿಲ್ಲ. ಶೆಟ್ಟರ್ ಅವರ ದೇಹ ಮಾತ್ರ ಕಾಂಗ್ರೆಸ್ ಗೆ ಹೋಗಿತ್ತು. ಅವರ ಮನಸ್ಸು ಬಿಜೆಪಿಯಲ್ಲಿಯೇ ಇತ್ತು. ಅವರಿಗೆ ಕಾಂಗ್ರೆಸ್ ಸೇರಿದ ಮೇಲೆ ಅಲ್ಲಿನ ಮನಸ್ಥಿತಿ ಅರ್ಥವಾಗಿದೆ. ಇದು ಬಿಜೆಪಿ ಮತ್ತು ಜಗದೀಶ್ ಶೆಟ್ಟರ್ ಅವರಿಗೂ ಅನಕೂಲವಾಗಲಿದೆ ಎಂದು ಹೇಳಿದರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಇಂದು ಕಾಂಗ್ರೆಸ್ ಗೆ ಗುಡ್ ಬೈ ಹೇಳಿ, ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಈ ಮೂಲಕ ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಬಿಗ್ ಶಾಕ್ ಎದುರಾಗಿದೆ.