ಬೆಂಗಳೂರು: ನಿರುದ್ಯೋಗಿ ಯುವಕರಿಗೆ ನೆರವು ನೆರುವ ಯುವನಿಧಿ ಯೋಜನೆಗೆ ಒಂದು ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಮಾರ್ಚ್ ಅಂತ್ಯದೊಳಗೆ 4 ಲಕ್ಷ ನೋಂದಣಿ ಗುರಿ ಹೊಂದಲಾಗಿದೆ.
ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ನ್ಯಾಷನಲ್ ಅಕಾಡೆಮಿಕ್ ಡಿಪಾಸಿಟರಿಯಲ್ಲಿ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ಪದವೀಧರರ ಪ್ರಮಾಣ ಪತ್ರಗಳಿದ್ದು, ಅಲ್ಲಿಂದಲೂ ಮಾಹಿತಿ ಪಡೆಯಲಾಗುತ್ತಿದೆ. ದಾಖಲೆಗಳು ಹೊಂದಾಣಿಕೆಯಾಗಿ ಫಲಿತಾಂಶ ಬಂದು ಆರು ತಿಂಗಳು ಆದ ಅಭ್ಯರ್ಥಿಗಳ ಖಾತೆಗೆ ಹಣ ವರ್ಗಾವಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಪ್ರತಿ ತಿಂಗಳು ಕೆಲಸ ಸಿಕ್ಕಿಲ್ಲ, ಉನ್ನತ ಶಿಕ್ಷಣಕ್ಕೆ ಹೋಗಿಲ್ಲ ಎಂದು ಸ್ವಯಂ ಘೋಷಿತ ಪ್ರಮಾಣ ಪತ್ರವನ್ನು ಅಪ್ಲೋಡ್ ಮಾಡಬೇಕಿದೆ ಎಂದು ಸಚಿವರು ತಿಳಿಸಿದ್ದಾರೆ.
ಉದ್ಯೋಗ ಮೇಳ ಆಯೋಜನೆ ಉದ್ದೇಶದಿಂದ ರಚನೆಯಾದ ಉನ್ನತ ಸಮಿತಿ ಸಭೆ ಜನವರಿ 25ರಂದು ನಡೆಯಲಿದ್ದು, ಬೆಂಗಳೂರಿನಲ್ಲಿ ಫೆಬ್ರವರಿ ಎರಡು ಅಥವಾ ಮೂರನೇ ವಾರ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗುವುದು. 50,000 ಅಭ್ಯರ್ಥಿಗಳು, ಕನಿಷ್ಠ 500 ಕಂಪನಿಗಳು ಭಾಗವಹಿಸಬೇಕೆಂಬುದು ಉದ್ದೇಶವಾಗಿದೆ ಎಂದು ಹೇಳಿದ್ದಾರೆ.