ರಷ್ಯಾ ಆಕ್ರಮಿತ ಉಕ್ರೇನ್ ಮಾರುಕಟ್ಟೆಯ ಮೇಲೆ ನಡೆದ ಕ್ಷಿಪಣಿ ದಾಳಿಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದಾರೆ. ಸ್ಥಳೀಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ.
ಡೊನೆಟ್ಸ್ಕ್ ನಗರದ ಉಪನಗರವಾದ ಟೆಕ್ಸ್ಟಿಲ್ಶ್ಚಿಕ್ನಲ್ಲಿ ಭಾನುವಾರ ಕ್ಷಿಪಣಿ ದಾಳಿ ನಡೆದಿದ್ದು, 25 ಜನರು ಸಾವನ್ನಪ್ಪಿದ್ದಾರೆ. ಕ್ಷಿಪಣಿಯನ್ನು ಉಕ್ರೇನ್ ಹಾರಿಸಿದೆ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ. ಟೆಕ್ಸ್ಟಿಲ್ಶ್ಚಿಕ್ ಉಪನಗರದಲ್ಲಿ ನಡೆದ ದಾಳಿಯಲ್ಲಿ ಇನ್ನೂ 10 ಜನರು ಗಾಯಗೊಂಡಿದ್ದಾರೆ ಎಂದು ರಷ್ಯಾ ಸ್ಥಾಪಿಸಿದ ಅಧಿಕಾರಿಗಳ ಮುಖ್ಯಸ್ಥ ಡೆನಿಸ್ ಪುಶಿಲಿನ್ ಹೇಳಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಬಗ್ಗೆ ಕೀವ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಘಟನಾ ಸ್ಥಳದಲ್ಲಿ ತುರ್ತು ಸೇವೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ಪುಶಿಲಿನ್ ಹೇಳಿದರು. ಭಾನುವಾರ, ರಷ್ಯಾದ ಉಸ್ಟ್-ಲುಗಾ ಬಂದರಿನ ರಾಸಾಯನಿಕ ಸಾರಿಗೆ ಟರ್ಮಿನಲ್ನಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ ಎಂದು ಪ್ರಾದೇಶಿಕ ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಂತರ, ಬೆಂಕಿ ಕಾಣಿಸಿಕೊಂಡಿತು. ಬಂದರಿನ ಮೇಲೆ ಉಕ್ರೇನಿಯನ್ ಡ್ರೋನ್ಗಳು ದಾಳಿ ನಡೆಸಿದ್ದು, ಗ್ಯಾಸ್ ಟ್ಯಾಂಕ್ ಸ್ಫೋಟಗೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.