alex Certify ಹೃದಯಾಘಾತದ ಅಪಾಯ ತಪ್ಪಿಸಲು ನಿಮಗೆ ತಿಳಿದಿರಲಿ ಆಯುರ್ವೇದದ ಈ ನಿಯಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೃದಯಾಘಾತದ ಅಪಾಯ ತಪ್ಪಿಸಲು ನಿಮಗೆ ತಿಳಿದಿರಲಿ ಆಯುರ್ವೇದದ ಈ ನಿಯಮ…!

ಇತ್ತೀಚಿನ ದಿನಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ವೇಗವಾಗಿ ಹೆಚ್ಚುತ್ತಿವೆ. ಫಾಸ್ಟ್‌ ಫುಡ್‌, ಜಂಕ್‌ ಫುಡ್‌, ಮಾನಸಿಕ ಒತ್ತಡ, ನಿದ್ರಾಹೀನತೆ ಮತ್ತು ದೈಹಿಕ ಪರಿಶ್ರಮದ ಕೊರತೆಯಂತಹ ಕಾರಣಗಳಿಂದ ಹೃದಯ ಕಾಯಿಲೆಗಳು ಬಹಳ ವೇಗವಾಗಿ ಹೆಚ್ಚುತ್ತಿವೆ. ಮೊದಲೆಲ್ಲ 60-70 ವರ್ಷದವರಲ್ಲಿ ಹೃದಯದ ಸಮಸ್ಯೆಗಳು ಬರುತ್ತಿದ್ದವು. ಈಗ 30-40 ವರ್ಷದ ಯುವಕರಲ್ಲೂ ಇದು ಸಾಮಾನ್ಯವಾಗುತ್ತಿದೆ.

ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತ, ಅಧಿಕ ಬಿಪಿ, ಕೊಲೆಸ್ಟ್ರಾಲ್ ಮೊದಲಾದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆಯುರ್ವೇದದ ಪ್ರಕಾರ ಕೆಲವು ನಿಯಮಗಳನ್ನು ಅಳವಡಿಸಿಕೊಂಡರೆ ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.

ಸಮತೋಲಿತ ಆಹಾರ

ಹೃದಯವನ್ನು ಆರೋಗ್ಯವಾಗಿಡುವಲ್ಲಿ ಸಮತೋಲಿತ ಆಹಾರವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆಯುರ್ವೇದದ ಪ್ರಕಾರ ನಮ್ಮ ದೈನಂದಿನ ಆಹಾರದಲ್ಲಿ ಸೊಪ್ಪು, ತರಕಾರಿಗಳು, ತಾಜಾ ಹಣ್ಣುಗಳು, ಧಾನ್ಯಗಳು, ಕಾಳುಗಳು ಮತ್ತು ನಟ್ಸ್‌ನಂತಹ ಎಲ್ಲಾ ರೀತಿಯ ಪೌಷ್ಟಿಕಾಂಶಗಳನ್ನು ಸೇರಿಸಿಕೊಳ್ಳಬೇಕು. ಇವುಗಳಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಬರ್‌ ಸಮೃದ್ಧವಾಗಿವೆ. ಇದು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಅಲ್ಲದೆ ಹೆಚ್ಚುವರಿ ಕೊಬ್ಬು, ಉಪ್ಪು ಮತ್ತು ಸಕ್ಕರೆಯ ಸೇವನೆಯನ್ನು ಸೀಮಿತಗೊಳಿಸಬೇಕು. ಏಕೆಂದರೆ ಇವು ಹೃದಯದ ಕಾಯಿಲೆಗಳ ಅಪಾಯವನ್ನು ಹೆಚ್ಚಿಸಬಹುದು.

ವ್ಯಾಯಾಮ ಮತ್ತು ಯೋಗ

ಹೃದಯವನ್ನು ಆರೋಗ್ಯವಾಗಿಡಲು ನಿಯಮಿತ ದೈಹಿಕ ಚಟುವಟಿಕೆ ಮತ್ತು ವ್ಯಾಯಾಮ ಬಹಳ ಮುಖ್ಯ. ಇದನ್ನು ಆಯುರ್ವೇದದಲ್ಲೂ ಒತ್ತಿ ಹೇಳಲಾಗಿದೆ. ಪ್ರತಿನಿತ್ಯ ಕೆಲವು ಸಮಯ ವ್ಯಾಯಾಮ ಮತ್ತು ಯೋಗ ಮಾಡುವುದರಿಂದ ಹೃದಯ ಸ್ನಾಯುಗಳು ಬಲಗೊಳ್ಳುತ್ತವೆ. ಇದು ಅಪಧಮನಿಗಳನ್ನು ಶುದ್ಧವಾಗಿಡಲು ಸಹಾಯ ಮಾಡುತ್ತದೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದಾಗಿ ಹೃದ್ರೋಗದ ಅಪಾಯವು ಚಿಕ್ಕ ವಯಸ್ಸಿನಲ್ಲಿಯೇ ಕಡಿಮೆಯಾಗುತ್ತದೆ. ವಾಕಿಂಗ್, ಜಾಗಿಂಗ್, ಸೈಕ್ಲಿಂಗ್, ಯೋಗ, ಪ್ರಾಣಾಯಾಮದಂತಹ ಚಟುವಟಿಕೆಗಳು ಹೃದಯಕ್ಕೆ ತುಂಬಾ ಪ್ರಯೋಜನಕಾರಿ. ಇವುಗಳನ್ನು ದಿನಚರಿಯಲ್ಲಿ ಸೇರಿಸಿಕೊಳ್ಳಬೇಕು.

ಒತ್ತಡ ಬೇಡ

ಆತಂಕ, ಭಯ, ಖಿನ್ನತೆಯಂತಹ ಭಾವನೆಗಳು ಹೃದಯ ಬಡಿತವನ್ನು ಹೆಚ್ಚಿಸುತ್ತವೆ. ಆದ್ದರಿಂದ ಆಯುರ್ವೇದದಲ್ಲಿ ಈ ನಕಾರಾತ್ಮಕ ಭಾವನೆಗಳನ್ನು ದೂರವಿಡಲು ಮತ್ತು ಮಾನಸಿಕ ಶಾಂತಿಯನ್ನು ಕಾಪಾಡಿಕೊಳ್ಳಲು ಒತ್ತು ನೀಡಲಾಗಿದೆ. ಪ್ರತಿನಿತ್ಯ ಯೋಗ, ಧ್ಯಾನ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ. ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಕಾರಾತ್ಮಕ ಸಮಯವನ್ನು ಕಳೆಯುವುದರಿಂದ  ಒತ್ತಡವನ್ನು ದೂರವಿಡಬಹುದು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...