ನವದೆಹಲಿ: ಪಶ್ಚಿಮ ದೆಹಲಿಯ ಪಿತಾಂಪುರ ಪ್ರದೇಶದಲ್ಲಿ ಗುರುವಾರ ರಾತ್ರಿ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ ಕನಿಷ್ಠ ಐವರು ಸಾವನ್ನಪ್ಪಿದ್ದಾರೆ.
ಭಾರೀ ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಇದು ವಿದ್ಯುತ್ ಸ್ಫೋಟ ಅಥವಾ ಶಾರ್ಟ್ ಸರ್ಕ್ಯೂಟ್ನಿಂದ ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಅಗ್ನಿಶಾಮಕ ಸೇವೆಗಳು(ಡಿಎಫ್ಎಸ್) ಮತ್ತು ದೆಹಲಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಧಿಕಾರಿಗಳ ಪ್ರಕಾರ, ಬೆಂಕಿಯ ಬಗ್ಗೆ ರಾತ್ರಿ 8.07-8.10 ರ ಸುಮಾರಿಗೆ ಕರೆ ಬಂದಿದೆ. ಪಿತಾಂಪುರದ ZP ಬ್ಲಾಕ್ನ ಸ್ಥಳೀಯ ನಿವಾಸಿಗಳು ಈ ಪ್ರದೇಶದ ಅಪಾರ್ಟ್ಮೆಂಟ್ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಆರೋಪಿಸಿದ್ದಾರೆ. ಡಿಎಫ್ಎಸ್ ಅವರು ಸ್ಥಳಕ್ಕೆ ತಲುಪಲು 10-15 ನಿಮಿಷಗಳನ್ನು ತೆಗೆದುಕೊಂಡರು.
ಸ್ಥಳದಿಂದ 7 ಮಂದಿಯನ್ನು ರಕ್ಷಿಸಿ ಎಲ್ಲರನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ಭಾರೀ ಬೆಂಕಿಯಿಂದಾಗಿ ಮೃತರ ದೇಹಗಳು ಸುಟ್ಟು ಕರಕಲಾಗಿವೆ ಎಂದು ಡಿಎಫ್ಎಸ್ ತಿಳಿಸಿದೆ.
ಡಿಎಫ್ಎಸ್ ಮುಖ್ಯಸ್ಥ ಅತುಲ್ ಗಾರ್ಗ್, ವಾಯುವ್ಯ ಡಿಸಿಪಿ ಜಿತೇಂದ್ರ ಮೀನಾ, ಮಾಹಿತಿ ನೀಡಿ, ಐವರು ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.