ನವದೆಹಲಿ: ದೇಶದ ಎಲ್ಲಾ ನಾಗರಿಕರಿಗೆ ಪೌಷ್ಟಿಕಾಂಶ ಮತ್ತು ಆರೋಗ್ಯ ಖಾತರಿಗಳನ್ನು ಒದಗಿಸುವ ತಮ್ಮ ಸರ್ಕಾರದ ಸಂಕಲ್ಪವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪುನರುಚ್ಚರಿಸಿದ್ದಾರೆ.
ಇಂದು ಮಧ್ಯಾಹ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ ಮೋದಿ, ಕಳೆದ ಒಂಬತ್ತು ವರ್ಷಗಳಲ್ಲಿ 25 ಕೋಟಿಗೂ ಹೆಚ್ಚು ಜನರು ಬಡತನದಿಂದ ಹೊರಬಂದಿದ್ದಾರೆ. ಪಾರದರ್ಶಕ ಮತ್ತು ದಕ್ಷ ಆಡಳಿತ ನೀಡುವ ಮೂಲಕ ಬಡತನವನ್ನು ಸೋಲಿಸಲು ಸರ್ಕಾರ ಬದ್ಧವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರಿಗೆ ಪಕ್ಕಾ ಮನೆಗಳನ್ನು ನೀಡಲಾಗಿದೆ ಎಂದು ತಿಳಿಸಿದ್ದಾರೆ.
ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯು ಎರಡು ತಿಂಗಳುಗಳನ್ನು ಪೂರೈಸಿದೆ. ಈ ಯಾತ್ರೆಯ ಮೂಲಕ ತನ್ನ ಎಲ್ಲಾ ಯೋಜನೆಗಳನ್ನು ಕಟ್ಟಕಡೆಯ ಹಂತದವರೆಗೆ ಕೊಂಡೊಯ್ಯುವ ಗುರಿಯನ್ನು ಸರ್ಕಾರ ಹೊಂದಿದೆ. ದೇಶಾದ್ಯಂತ ಜನರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ತಿಂಗಳಲ್ಲೂ ಯಾತ್ರೆ ಮುಂದುವರಿಯಲಿದೆ. ವಿಕಸಿತ್ ಭಾರತ್ ಸಂಕಲ್ಪ ಯಾತ್ರೆಯು ಜನ ಆಂದೋಲನವಾಗಿ ಮಾರ್ಪಟ್ಟಿದ್ದು, ಇಲ್ಲಿಯವರೆಗೆ 15 ಕೋಟಿ ಜನರು ಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಹೇಳಿದ್ದಾರೆ.