ಬೆಂಗಳೂರು: ಅಯೋಧ್ಯೆ ಶ್ರೀ ರಾಮ ಮಂದಿರದಲ್ಲಿ ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯ ದಿನವಾದ ಜನವರಿ 22ರಂದು ರಾಜ್ಯದಲ್ಲಿ ಶಾಲೆಗಳಿಗೆ ರಜೆ ನೀಡುವ ಬದಲಿಗೆ ಪ್ರಾಣ ಪ್ರತಿಷ್ಠೆಯ ನೇರ ಪ್ರಸಾರಕ್ಕೆ ಅವಕಾಶ ನೀಡುವುದು ಒಳ್ಳೆಯದು ಎಂದು ಖಾಸಗಿ ಶಾಲಾ ಸಂಘಟನೆ ಕ್ಯಾಮ್ಸ್ ಸಲಹೆ ನೀಡಿದೆ.
ಸಂಘಟನೆಯ ಕಾರ್ಯದರ್ಶಿ ಡಿ. ಶಶಿಕುಮಾರ್ ಈ ಬಗ್ಗೆ ಮಾಹಿತಿ ನೀಡಿದ್ದು, ನೇರ ಪ್ರಸಾರ ವ್ಯವಸ್ಥೆಯ ಜೊತೆಗೆ ರಾಜಕೀಯ ಹೊರಗಿಟ್ಟು, ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಮನೋಭಾವಕ್ಕೆ ಒತ್ತು ಕೊಡುವ ರೀತಿಯಲ್ಲಿ ಆಯಾ ಶಿಕ್ಷಣ ಸಂಸ್ಥೆಗಳು ಕಾರ್ಯಕ್ರಮ ರೂಪಿಸಬಹುದು ಎಂದು ಹೇಳಿದ್ದು, ಜನವರಿ 22ರಂದು ರಾಜ್ಯದಲ್ಲಿ ಶಾಲೆಗೆ ರಜೆ ನೀಡುವ ಬದಲು ನೇರ ಪ್ರಸಾರ ವೀಕ್ಷಣೆಗೆ ಅವಕಾಶ ನೀಡಬೇಕೆಂದು ಸಲಹೆ ನೀಡಿದ್ದಾರೆ.