ಬೆಳಗಾವಿ : ‘ ಸಂಗೊಳ್ಳಿ ರಾಯಣ್ಣ’ ಶಾಲೆಯಲ್ಲಿ ಕನ್ನಡದ ಮಕ್ಕಳಿಗೆ ಶೇ.65 ರಷ್ಟು ಮೀಸಲಾತಿ ನೀಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದರು.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಶಾಲೆಯನ್ನು ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಸಂಗೊಳ್ಳಿ ರಾಯಣ್ಣ’ ಶಾಲೆಯಲ್ಲಿ ಕನ್ನಡದ ಮಕ್ಕಳಿಗೆ ಶೇ.65 ರಷ್ಟು ಮೀಸಲಾತಿ ನೀಡಲಾಗುತ್ತದೆ, ರಾಯಣ್ಣ ಶಾಲೆಯಲ್ಲಿ ಕನ್ನಡ ಮಕ್ಕಳಿಗೆ ಮೀಸಲಾತಿ ನೀಡಲು ಸಿದ್ಧರಿದ್ದೇವೆ, .ಗುಣಮಟ್ಟದ ಶಿಕ್ಷಣ ನೀಡಲು ಸೈನಿಕ ಶಾಲೆ ಸ್ಥಾಪನೆ ಮಾಡಿದ್ದೇವೆ ಎಂದು ಸಂಗೊಳ್ಳಿ ಗ್ರಾಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.ಈ ಹಿಂದೆ ಸೈನಿಕ ಶಾಲೆ ನಿರ್ಮಿಸಲು 110 ಎಕರೆ ಜಮೀನು ನೀಡಿದ್ದೆ, ನಾನೇ ಶಂಕುಸ್ಥಾಪನೆ ಕೂಡ ಮಾಡಿದ್ದೆ. ಇದೀಗ ನಾನೆ ಶಾಲೆಯನ್ನು ಉದ್ಘಾಟಿಸುತ್ತಿರುವುದಕ್ಕೆ ಬಹಳ ಸಂತೋಷವಾಗುತ್ತಿದೆ ಎಂದರು.
ಕರ್ನಾಟಕದ ಗಡಿ ಭಾಗದ 865 ಗ್ರಾಮಗಳಲ್ಲಿ ಮಹಾರಾಷ್ಟ್ರ ಸರ್ಕಾರ ಆರೋಗ್ಯ ವಿಮೆ ಜಾರಿ ಮಾಡಲು ಮುಂದಾಗಿರುವ ಬಗ್ಗೆ ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಂಡಿದೆ. ಮಹಾರಾಷ್ಟ್ರ ಕರ್ನಾಟಕದೊಳಗೆ ಬರಬಾರದು ಎಂದು ಮುಖ್ಯಕಾರ್ಯದರ್ಶಿಗಳು ಈಗಾಗಲೇ ಮಹಾರಾಷ್ಟ್ರದವರಿಗೆ ಸೂಚಿಸಿದ್ದಾರೆ.
ಸೈನಿಕ ಶಾಲೆಯಲ್ಲಿ ಕನ್ನಡದವರಿಗೆ ಸೀಟುಗಳನ್ನು ಶೇ.65 ರಷ್ಟು ಹಾಗೂ ಇತರರಿಗೆ ಶೇ.35 ರಷ್ಟು ಸೀಟುಗಳು ಹಂಚಿಕೆಯಾಗಬೇಕೆಂದು ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಶಿಕ್ಷಣದೊಂದಿಗೆ ದೇಶಪ್ರೇಮವನ್ನು ಮಕ್ಕಳಲ್ಲಿ ಬೆಳೆಸಲಾಗುವುದು. ಇಲ್ಲಿ ಕಲಿತವರು ಸೇನೆಗೆ ಸೇರ್ಪಡೆಯಾಗುವ ಅವಕಾಶವಿದೆ.
ಸುಮಾರು 110 ಎಕರೆ ಜಮೀನನ್ನು ಸರ್ಕಾರದ ವತಿಯಿಂದ ರಾಕ್ ಗಾರ್ಡನ್ ಮತ್ತು ವಸ್ತುಸಂಗ್ರಹಾಲಯ ನಿರ್ಮಾಣಕ್ಕಾಗಿ ಅನುದಾನವನ್ನೂ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನೀಡಲಾಗಿತ್ತು. ಮುಖ್ಯಮಂತ್ರಿಯಾಗಿ ಶಂಕುಸ್ಥಾಪನೆ ಮಾಡಿ, ಉದ್ಘಾಟನೆಯನ್ನೂ ಮಾಡುತ್ತಿದ್ದೇನೆ. ಎಲ್ಲವೂ ಉತ್ತಮವಾಗಿ ಮೂಡಿಬಂದಿದೆ. ರಾಯಣ್ಣ ಅವರ ಜ್ಞಾಪಕಾರ್ಥವಾಗಿ ಇಲ್ಲಿ ರಾಕ್ ಗಾರ್ಡನ್ ಮತ್ತು ವಸ್ತು ಸಂಗ್ರಹಾಲಯ ನಿರ್ಮಾಣವಾಗಿದೆ ಎಂದರು.
ರೇವಣಸಿದ್ದೇಶ್ವರ ಸಿಂಹಾಸನಾಧೀಶ್ವರ ನಿರಂಜನಾನಂದಪುರಿ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೊಳಿ, ಬೈರತಿ ಸುರೇಶ್, ಶಿವರಾಜ್ ತಂಗಡಗಿ, ಶಾಸಕರಾದ ಮಹಂತೇಶ್ ಕೌಜಲಗಿ, ಎಚ್.ವೈ.ಮೇಟಿ, ಮಾಜಿ ಸಚಿವ ಎಚ್.ಎಂ.ರೇವಣ್ಣ, ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸೇರಿ ಹಲವು ಪ್ರಮುಖರು ಉಪಸ್ಥಿತರಿದ್ದರು.