ಪಟ್ಟಣಂತಿಟ್ಟ: ಸಂಕ್ರಾಂತಿ ಹಬ್ಬದ ದಿನವಾದ ಇಂದು ಸೋಮವಾರ ಸಂಜೆ ಕೇರಳದ ಪ್ರಸಿದ್ದ ಶಬರಿಮಲೆ ಅಯ್ಯಪ್ಪ ಕ್ಷೇತ್ರದಲ್ಲಿ ಮಕರಜ್ಯೋತಿ ದರ್ಶನವಾಗಲಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಕಾರಣ ದೇಗುಲದಲ್ಲಿ ಸಕಲ ಸಿದ್ಧತೆಗಳನ್ನೂ ಮಾಡಿಕೊಳ್ಳಲಾಗಿದೆ. ಜ.15ರಂದು ಮಕರ ಸಂಕ್ರಮಣದ ಬೆಳಗ್ಗಿನ ಜಾವ 2.46ಕ್ಕೆ ಮಕರ ಸಂಕ್ರಮಣ ಪೂಜೆ ನಡೆದು ಸಂಜೆ 6.30ಕ್ಕೆ ಮಕರಜ್ಯೋತಿ ದರ್ಶನ ನಡೆಯಲಿದೆ. ಪಂದಳಂ ಅರಮನೆಯಿಂದ ತರಲಾಗುವ ತಿರುವಾಭರಣ ಸಹಿತ ದೀಪಾರಾಧನೆಯ ಬಳಿಕ ಮಕರಜ್ಯೋತಿ ದರ್ಶನವಾಗಲಿದೆ. ಮಕರಜ್ಯೋತಿಯಂದು ಧರ್ಮಶಾಸ್ತನಿಗೆ ತಿರುವಾಭರಣ ತೊಡಿಸಿ ದೀಪಾರಾಧನೆ ನಡೆಸಿದ ಬಳಿಕ ಮಣಿಮಂಟಪದಲ್ಲಿದೀಪದ ಮುಂದೆ ಮಂಡಲ ರಚನೆ ಆರಂಭವಾಗಲಿದೆ.
ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದು ಮಕರಜ್ಯೋತಿ ದರ್ಶನವಾಗಲಿದ್ದು, ಮಕರ ಜ್ಯೋತಿ ವೀಕ್ಷಣೆಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ. ದೀಪಾರಾಧನೆ ಬಳಿಕ ದೇವಾಲಯದ ಎದುರಿನ ಪೊನ್ನಂಬಲ ಬೆಟ್ಟದಲ್ಲಿ ಪವಿತ್ರ ಮಕರಜ್ಯೋತಿ ಭಕ್ತರಿಗೆ ಕಾಣಿಸಲಿದೆ.
ಶಬರಿಮಲೆಗೆ ಸೋಮವಾರ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಹೀಗಾಗಿ, ಭದ್ರತೆಯಲ್ಲಿ ಯಾವುದೇ ತೊಡಕು ಉಂಟಾಗದಂತೆ ನೋಡಿಕೊಳ್ಳಲು ಸಕಲ ಕ್ರಮ ಕೈಗೊಳ್ಳಲಾಗಿದೆ. ಶಬರಿಮಲೆಗೆ 4 ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ 1 ಸಾವಿರ ಹೆಚ್ಚುವರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ತೀರ್ಮಾನಿಸಲಾಗಿದೆ.